ಸೋಮವಾರಪೇಟೆ, ಸೆ. ೧೩: ರಾಜ್ಯದಲ್ಲಿ ನಡೆಯುವ ಜಾತಿ ಗಣತಿ ಸಂದರ್ಭ ಒಕ್ಕಲಿಗರು ತಪ್ಪದೇ ಗಣತಿ ಕಾರ್ಯದಲ್ಲಿ ಭಾಗಿಯಾಗಬೇಕು. ತಪ್ಪಿದಲ್ಲಿ ಭವಿಷ್ಯದಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಒಕ್ಕಲಿಗರ ಜಾಗೃತಿಗಾಗಿ ಗ್ರಾಮ ಮಟ್ಟದಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಒಕ್ಕಲಿಗರನ್ನು ನಿರ್ನಾಮ ಮಾಡುವ ಹುನ್ನಾರ ಒಂದೆಡೆ ನಡೆಯುತ್ತಿದೆ. ಜಾತಿ ಗಣತಿ ಸಂದರ್ಭ ತಪ್ಪು ಮಾಹಿತಿ ನೀಡಿದರೆ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡAತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಗಣತಿಯಲ್ಲಿ ಭಾಗಿಯಾಗಬೇಕೆಂದರು. ಸಮೀಕ್ಷೆಗಾರರು ಮನೆಗೆ ಬಂದಾಗ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು. ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು. ಇತರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮಾಹಿತಿಗಳನ್ನು ತಪ್ಪದೇ, ವಾಸ್ತವಾಂಶದ ವರದಿ ನೀಡಬೇಕು ನೀಡಬೇಕೆಂದು ಮನವಿ ಮಾಡಿದರು. ಈಗಾಗಲೇ ಸಮುದಾಯದ ಸ್ವಾಮೀಜಿಗಳನ್ನು ಒಳಗೊಂಡAತೆ ಒಕ್ಕಲಿಗರ ಸಂಘದಿAದ ಸಭೆ ಮಾಡಲಾಗಿದೆ. ಎಲ್ಲರೂ ತಮ್ಮ ಆಧಾರ್ ಕಾರ್ಡ್ ನೋಂದಣಿ ಮಾಡಬೇಕು. ಆಧಾರ್‌ಗೆ ಮೊಬೈಲ್ ಲಿಂಕ್ ಮಾಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಮುದಾಯದ ಸ್ವಾಮೀಜಿಗಳು, ಪ್ರಮುಖರು, ಮುಖಂಡರುಗಳು ಗ್ರಾಮಗಳಿಗೆ ಭೇಟಿ ನೀಡಲಿದ್ದು, ಗ್ರಾಮಮಟ್ಟದಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುವುದು ಎಂದರು.

ಇಡೀ ಒಕ್ಕಲಿಗ ಸಮಾಜ ಜಾತಿ ಗಣತಿ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು. ತಪ್ಪಿದರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಈಗಾಗಲೆ ಒಕ್ಕಲಿಗರು ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. ಗಣತಿ ಸಂದರ್ಭವೂ ತಪ್ಪು ಮಾಹಿತಿ ನೀಡಿದರೆ ಭವಿಷ್ಯದಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾಗುತ್ತದೆ. ಎಲ್ಲಾ ಸಮುದಾಯಗಳು ಮೀಸಲಾತಿಗೆ ಹೋರಾಟ ಮಾಡುತ್ತಿದ್ದರೆ ಒಕ್ಕಲಿಗರು ನಿದ್ರಾವಸ್ಥೆಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ಗಣತಿ ಕಾರ್ಯ ಪ್ರಮುಖವಾಗಿದ್ದು, ಯಾವೊಬ್ಬ ಒಕ್ಕಲಿಗನೂ ಸಹ ಗಣತಿಯಿಂದ ಹೊರಗುಳಿಯಬಾರದು ಎಂದು ಸಮುದಾಯದವರಿಗೆ ಕಿವಿಮಾತು ಹೇಳಿದರು.