ಸೋಮವಾರಪೇಟೆ, ಸೆ. ೧೩: ಶಿಕ್ಷಕ ಸಮುದಾಯದ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಶಿಕ್ಷಕರುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ ಇವುಗಳ ಆಶ್ರಯದಲ್ಲಿ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದ ಭಾರತವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳಿಗೆ ಬದುಕುವ ಕಲೆಯನ್ನು ಕಲಿಸುವ ನಿಮಗಳ ಸೇವೆ ಶ್ಲಾಘನೀಯ ಎಂದು ಶಾಸಕರು ಅಭಿಪ್ರಾಯಿಸಿದರು.
ಕೊಡಗು ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ .ಪರೀಕ್ಷೆಯಲ್ಲಿ ಕಳೆದ ಬಾರಿ ರಾಜ್ಯಕ್ಕೆ ೪ನೇ ಸ್ಥಾನ ಪಡೆದ ಕೊಡಗು ಈ ಬಾರಿ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮಾತನಾಡಿ, ಶಿಕ್ಷಕ ವೃತ್ತಿ ಶ್ರೇಷ್ಠವಾದುದು.
ಕೊಡಗಿನಲ್ಲಿ ಶಿಕ್ಷಕರು ಪಾಠ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಯಲ್ಲೂ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಶಾಲಾ ಪರಿಸರ ಹಾಗೂ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಇದಕ್ಕೆ ಕಾರಣ ಶಿಕ್ಷಕರು ಎಂದು ಶ್ಲಾಘಿಸಿದರು.
ಮುಖ್ಯ ಭಾಷಣಕಾರರಾಗಿ ಭಾಗಿಯಾಗಿದ್ದ ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರ ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗದೇ ಮನುಕುಲಕ್ಕೆ ಮಾನವೀಯತೆಯ ಪಾಠ ನೀಡುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು, ಡಯಟ್ ಪ್ರಾಂಶುಪಾಲ ಉದಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್, ಖಾಸಗಿ ಶಾಲಾ ಸಂಘದ ಅಧ್ಯಕ್ಷ ದಾಮೋದರ್, ಶಿಕ್ಷಕರ ಸಂಘಟನೆಗಳ ಅಧ್ಯಕ್ಷರುಗಳಾದ ಸಿ.ಟಿ. ಸೋಮಶೇಖರ್, ಹೆಚ್.ಎನ್. ಮಂಜುನಾಥ್, ಟಿ.ಕೆ. ಬಸವರಾಜು, ಹ್ಯಾರಿ ಮೋರಸ್, ಕೆ.ಎಸ್. ಪ್ರಸನ್ನಕುಮಾರ್, ಪ್ರದೀಪ್, ಹೇಮಂತ್, ಎಸ್.ಎ. ಯೋಗೇಶ್, ತೇಜಾವತಿ, ಸುಜಾತ, ಶಿವಕುಮಾರ್, ಹೆಚ್.ಆರ್. ಸುರೇಶ್, ವೆಂಟಕನಾಯಕ್, ದಿನೇಶ್, ಸೋಮಯ್ಯ, ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಸ್ವಾಗತಿಸಿ, ಶಿಕ್ಷಕರ ಸಂಘದ ಬಸವರಾಜು ಹಾಗೂ ರತ್ನಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಆರಂಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅಗಲಿದ ನಿವೃತ್ತ ಹಾಗೂ ವೃತ್ತಿನಿರತ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಂದೀಪನಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರು ಪ್ರಾರ್ಥಿಸಿದರೆ, ಶಿಕ್ಷಕಿ ಪ್ರೇಮಾ, ಆಶಾ, ಕವಿತ ತಂಡದಿAದ ನಾಡಗೀತೆ ಮೂಡಿಬಂತು. ನವೀನಾ ತಂಡದವರು ರೈತಗೀತೆ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ಎಸ್.ಎಸ್.ಎಲ್.ಸಿ. ಯಲ್ಲಿ ಶೇ. ೧೦೦ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ಅನುದಾನ ರಹಿತ ಶಾಲೆಗಳ ಹಿರಿಯ ಶಿಕ್ಷಕರು, ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಒಕ್ಕಲಿಗರ ಸಮುದಾಯ ಭವನದ ಪ್ರವೇಶ ದ್ವಾರದಲ್ಲಿ ಮುಳ್ಳೂರು ಸರ್ಕಾರಿ ಶಾಲೆಯ ಶಿಕ್ಷಕ ಸತೀಶ್ ಅವರು ತಯಾರಿಸಿದ್ದ ಸೆಲ್ಫಿ ಸ್ಟೇಜ್‌ನಲ್ಲಿ ಶಿಕ್ಷಕರು ಸಂಭ್ರಮದಿAದ ಫೋಟೋ ಶೂಟ್‌ನಲ್ಲಿ ಭಾಗಿಯಾಗಿದ್ದರು. ರಾಷ್ಟçದ ಮಾಜಿ ರಾಷ್ಟçಪತಿ ದಿವಂಗತ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಸಹಿತ ಶಿಕ್ಷಕರ ದಿನಾಚರಣೆಗೆ ಶುಭಕೋರಿದ ಸಾಲುಗಳನ್ನು ಅಳವಡಿಸಿ, ಆಕರ್ಷಕ ಸ್ಟೇಜ್ ನಿರ್ಮಾಣ ಮಾಡಲಾಗಿತ್ತು. ಇದು ಶಿಕ್ಷಕರನ್ನು ಆಕರ್ಷಿಸಿದ್ದು ಮಾತ್ರವಲ್ಲದೇ, ಸೆಲ್ಫಿ ತೆಗೆದುಕೊಳ್ಳಲು ವೇದಿಕೆಯಾಯಿತು.