ಕುಶಾಲನಗರ, ಸೆ. ೧೨: ಬೈಚನಹಳ್ಳಿಯಲ್ಲಿ ಗ್ರಾಮಸ್ಥರ ಹೋರಾಟಕ್ಕೆ ಸ್ಪಂದಿಸಿದ ಶಾಸಕ ಡಾ. ಮಂತರ್ ಗೌಡ ಅವರು ಹಿಂದೂ ರುದ್ರಭೂಮಿಗೆ ೫೨ ಸೆಂಟ್ ಜಾಗ ಮಂಜೂರು ಮಾಡಿದ್ದು ದಾಖಲೆ ಪತ್ರ ಹಸ್ತಾಂತರಿಸಿದರು.
ಬೈಚನಹಳ್ಳಿ ಮಾರಮ್ಮ ದೇವಾಲಯ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ದಾಖಲೆ ಪತ್ರ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ರಾಜಕಾರಣಿಗಳು ಮಾನವೀಯತೆ ದೃಷ್ಠಿಯಿಂದಲೂ ಕಾರ್ಯನಿರ್ವಹಿಸಬೇಕಿದೆ. ಮಾನವ ಗತಿಸಿದ ನಂತರ ಅಂತ್ಯಸAಸ್ಕಾರ ಕಾರ್ಯ ಅತ್ಯಂತ ಗೌರವಯುತವಾಗಿ ನಡೆಯಬೇಕಿದೆ. ಇದಕ್ಕೆ ಸಮರ್ಪಕ ರುದ್ರಭೂಮಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಗ್ರಾಮಸ್ಥರ ಹೋರಾಟ ಇಂದು ಸಫಲವಾಗಿದ್ದು ಮುಂದಿನ ದಿನಗಳಲ್ಲಿ ಇತರರಿಗೆ ಅನಾನುಕೂಲವಾಗದಂತೆ ಸರಕಾರದ ಸೌಲಭ್ಯ ಪಡೆದುಕೊಂಡು ಸ್ಮಶಾನ ಅಭಿವೃದ್ಧಿ ಕಾರ್ಯ ನಡೆಸಲು ಸೂಚಿಸಿದರು.
ವಾರ್ಡ್ ಸದಸ್ಯ, ಹೋರಾಟ ಸಮಿತಿ ಪ್ರಮುಖ ಬಿ.ಎಲ್. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಮಶಾನದ ಕೊರತೆಯಿಂದ ಉಂಟಾಗಿದ್ದ ಸಮಸ್ಯೆಗಳನ್ನು ವಿವರಿಸಿದ ಅವರು, ಈ ಭಾಗದ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಮನವಿ ಸಲ್ಲಿಸಿದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕೇವಲ ಬೈಚನಹಳ್ಳಿ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮದವರಿಗೂ ಕೂಡ ಈ ಸ್ಮಶಾನ ಉಪಯೋಗವಾಗಲಿದೆ. ಗ್ರಾಮದಲ್ಲಿ ಗೋಮಾಳ ಉಳಿವಿಗೆ ನಡೆದ ಬೃಹತ್ ಹೋರಾಟವನ್ನು ಮೆಲುಕು ಹಾಕಿದರು.
ಈ ಸಂದರ್ಭ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಮಶಾನ ಹೋರಾಟ ಸಮಿತಿ ಪದಾಧಿಕಾರಿಗಳನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ, ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಿ, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಸದಸ್ಯರಾದ ಖಲೀಮುಲ್ಲಾ, ಅಮೃತ್ರಾಜ್, ಸುರಯ್ಯಭಾನು, ಎಂ.ಕೆ. ದಿನೇಶ್, ಎಂ.ಎA. ಪ್ರಕಾಶ್, ತಹಶೀಲ್ದಾರ್ ಕಿರಣ್ ಗೌರಯ್ಯ, ಸಿಒ ಗಿರೀಶ್, ಮಾಜಿ ಸದಸ್ಯ ಅಶೋಕ್, ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಗೆಳೆಯರ ಬಳಗದ ಪ್ರಮುಖರು, ಗ್ರಾಮಸ್ಥರು ಇದ್ದರು.