ಗೋಣಿಕೊಪ್ಪಲು, ಸೆ. ೧೨: ಕ್ರೀಡೆಯ ತವರು ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಉತ್ತೇಜನ ಹೆಚ್ಚಾಗಬೇಕು. ಶಾಲಾ ಹಂತದಲ್ಲಿ ಹಾಕಿ ಆಟಕ್ಕೆ ಹೆಚ್ಚಿನ ಒತ್ತು ನೀಡುವಂತಾಗಬೇಕು. ಭಾರತ ತಂಡದಲ್ಲಿ ಕೊಡಗಿನ ಪ್ರತಿಭೆಗಳು ಅರಳುವಂತಾಗಬೇಕು. ಈ ನಿಟ್ಟಿನಲ್ಲಿ ಹಾಕಿ ಪಂದ್ಯಾವಳಿಯನ್ನು ಆಗಿಂದ್ದಾಗಿಯೇ ಆಯೋಜಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದು ನಿವೃತ್ತ ಕರ್ನಲ್, ಒಲಂಪಿಯನ್ ಬಾಳೆಯಡ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ಕೂರ್ಗ್ ಹಾಕ್ಸ್ ಮತ್ತು ಯುಇಟಿಎಸ್‌ಸಿ ಹಾಕಿ ಕೂರ್ಗ್ ಆಶ್ರಯದಲ್ಲಿ ೩ ದಿನ ನಡೆಯಲಿರುವ ಕಿರಿಯರ ಟೂರ್ನಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಟರ್ಫ್ಗಳಂತಹ ಮೈದಾನಗಳು ಹಾಕಿ ಆಟಗಾರರಿಗೆ ಅನುಕೂಲವನ್ನು ಕಲ್ಪಿಸುತ್ತಿದೆ. ಹಾಕಿ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಈ ವೇಳೆ ಯುವ ಆಟಗಾರರಿಗೆ ಕರೆ ನೀಡಿದರು. ಬಾಲಕರ ತಂಡ ಹಾಗೂ ಮಹಿಳೆಯರ ತಂಡಕ್ಕೆ ಆಯೋಜಕರು ವಿಶೇಷ ಅವಕಾಶ ಕಲ್ಪಿಸಿರುವುದನ್ನು ಶ್ಲಾಘಿಸಿದರು.

ಒಲಂಪಿಯನ್ ಸಿ.ಎಸ್.ಪೂಣಚ್ಚ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದಲ್ಲಿ ಕೊಡಗಿನ ಹಾಕಿ ಪಟುಗಳು ಇಲ್ಲದಿರುವುದು ಕಾಣುತ್ತಿದ್ದೇವೆ. ಭಾರತ ತಂಡದಲ್ಲಿ ಕೊಡಗಿನ ಪ್ರತಿಭೆಗಳು ಕಾಣುವಂತಾಗಲು ಎಲ್ಲಾರ ಪ್ರಯತ್ನ ಅತ್ಯಗತ್ಯ. ಕೊಡಗಿನಲ್ಲಿ ನೂರಾರು ಶಾಲೆಗಳಿದ್ದರೂ ಹಾಕಿ ಕ್ರೀಡೆಗೆ ಪ್ರೋತ್ಸಾಹ ಲಭಿಸದ ಹಿನ್ನಲೆಯಲ್ಲಿ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ ಎಂದರು.

ಬಾಲಕರಲ್ಲಿ ಯುಟಿಎಸ್‌ಸಿ ಹಾಕಿ ಅಕಾಡೆಮಿ ಪೊನ್ನಂಪೇಟೆ, ಸೆಂಟ್ ಆಂಟೋನಿ ಹೈಸ್ಕೂಲ್, ನಾಪೋಕ್ಲು ಅಂಕುರ್ ಪಬ್ಲಿಕ್ ಸ್ಕೂಲ್, ಪತ್ತಿರಿಯಾದ್ ಹಾಕಿ ಅಕಾಡೆಮಿ, ಕೂಡಿಗೆ ಡಿವೈಇಎಸ್‌ಬಿ ವೀರಾಜಪೇಟೆ ತ್ರಿವೇಣಿ ಸ್ಕೂಲ್ ಕೊಚ್ಚಿನ್ ಇಎಚ್‌ಎಲ್, ಪೊನ್ನಂಪೇಟೆ ಅಪ್ಪಚ್ಚಕವಿ ಬೆಂಗಳೂರು ಜೆಎಫ್‌ಎಚ್‌ಎ ಬೆಂಗಳೂರು ಆರ್ಮಿ ಬಾಯ್ಸ್ ಕೂಡಿಗೆ ಡಿವೈಇಎಸ್‌ಎ ನಾಪೋಕ್ಲು ಪಳೇ ತಾಲೂಕ್ ತಂಡಗಳು, ಮಹಿಳೆಯರಲ್ಲಿ ಕೂರ್ಗ್ ಇಲೆವೆನ್, ಕೊಡಗು ವಂಡರ್ ವುಮೆನ್ಸ್, ಕೇರಳ ಸೈಸ್ ವುಮೆನ್ಸ್ ಕೂರ್ಗ್ ಪ್ಲೇಯರ್ಸ್ ಪುರುಷರ ಕೂರ್ಗ್ ಹಾಕ್ಸ್ ಮತ್ತು ಯುಟಿಎಸ್‌ಸಿ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಟೂರ್ನಿಯ ಸಂಚಾಲಕರಾದ ಮೇಕೇರಿರ ಬೆಲ್ಲು ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಹಾಕಿ ಆಟಗಾರ ಕಾಂಡAಡ ಜೋಯಪ್ಪ, ಕ್ರೀಡಾ ವಿಶ್ಲೇಷಕ ಚೆಪ್ಪುಡೀರ ಕಾರ್ಯಪ್ಪ, ಅಂತರರಾಷ್ಟಿçÃಯ ಹಾಕಿ ಆಟಗಾರ ಕುಲ್ಲೇಟಿರ ಉತ್ತಯ್ಯ, ಅಪ್ಪಚ್ಚಕವಿ ವಿದ್ಯಾಲಯ ಪ್ರಾಂಶುಪಾಲ ಎಸ್.ಎಸ್. ತನುಜ, ಹಿರಿಯ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್ ಭಾಗವಹಿಸಿದ್ದರು.

ಟೂರ್ನಿ ನಿರ್ದೇಶಕರಾಗಿ ಕಳ್ಳಿಚಂಡ ಗೌತಮ್, ಆಂಪೈರ್ ವ್ಯವಸ್ಥಾಪಕರಾಗಿ ಕುಪ್ಪಂಡ ದಿಲನ್ ಹಾಗೂ ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ಕಾರ್ಯ ನಿರ್ವಹಿಸಿದರು. ಕ್ರೆಡೋ ಮೆಡಿಕಲ್ ಸೆಂಟರ್ ಪ್ರೆöÊವೆಟ್ ಲಿಮಿಟೆಡ್ ವೈದ್ಯಕೀಯ ಸೌಲಭ್ಯ ಒದಗಿಸಿತು. .