ಮಡಿಕೇರಿ, ಸೆ. ೧೨: ಐತಿಹಾಸಿಕ ನಾಡ ಹಬ್ಬ ದಸರಾ ಸಮೀಪಿಸುತ್ತಿರುವಂತೆ ದಸರಾ ಹಬ್ಬವನ್ನು ನೆನಪಿಸುವಂತೆ ಮಿನಿ ದಸರಾ ಮಂಜಿನ ನಗರಿಯಲ್ಲಿ ಮೇಳೈಸಿತು. ಇಲ್ಲಿನ ಶಾಂತಿನಿಕೇತನ ಬಡಾವಣೆಯ ಶಾಂತಿನಿಕೇತನ ಯುವಕ ಸಂಘದಿAದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಉತ್ಸವ ಮೂರ್ತಿಯ ವಿಸರ್ಜನೋತ್ಸವದ ಶೋಭಾಯಾತ್ರೆ ದಸರಾಗೂ ಕಡಿಮೆ ಇಲ್ಲವೆಂಬAತೆ ಜರುಗಿತು.

ಲೋಕ ಕಲ್ಯಾಣಕ್ಕಾಗಿ ಗಣೇಶನಿಂದ ಶತಮಹಿಷಿಯನ್ನು ಸಂಹರಿಸುವ ಕಥಾ ಹಂದರ ಹೊಂದಿದ್ದ ಚಲನ ವಲನಗಳನ್ನೊಳಗೊಂಡ ಭವ್ಯ ಮಂಟಪದ ಪ್ರದರ್ಶನ ಜನಮನ ಸೂರೆಗೊಂಡಿತು. ಧ್ವನಿ, ಬೆಳಕಿನ ಅಬ್ಬರದೊಂದಿಗೆ ಮಡಿಕೇರಿಯಲ್ಲಿ ಕಿನ್ನರ ಲೋಕವನ್ನೇ ಸೃಷ್ಟಿಸಿದಂತಿತ್ತು.

ಶಾAತಿನಿಕೇತನ ಬಡಾವಣೆಯಿಂದ ಮುಖ್ಯ ರಸ್ತೆಯ ಒಂದು ಬದಿಯಲ್ಲಿ ಸಾಗಿಬಂದ ಶೋಭಾಯಾತ್ರೆ ಜ. ತಿಮ್ಮಯ್ಯ ವೃತ್ತದ ಬಳಿ ಆಗಮಿಸುತ್ತಿರುವಂತೆ ಸಹಸ್ರಾರು ಮಂದಿ ನೆರೆದಿದ್ದರು. ಅಲ್ಲಿಯವರೆಗೆ ಪೊಲೀಸರು ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರಾದರೂ ಜ. ತಿಮ್ಮಯ್ಯ ವೃತ್ತದ ಬಳಿ ಜನರು ಅತ್ಯಧಿಕ ಸಂಖ್ಯೆಯಲ್ಲಿ ನೆರೆದಿದ್ದರಿಂದ ಅನಿವಾರ್ಯವಾಗಿ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಮಂಟಪದ ಸೊಬಗನ್ನು ಮೊಬೈಲ್ ಕ್ಯಾಮರದಲ್ಲಿ ಸೆರೆಹಿಡಿಯುವಲ್ಲಿ ಮಗ್ನರಾಗಿದ್ದರು. ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಬಂದೋಬಸ್ತ್, ವಾಹನ ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು. ನೂರಾರು ಸಂಖ್ಯೆಯಲ್ಲಿ ಶಾಂತಿನಿಕೇತನ ಸಂಘದ ಯುವಕರು ಸ್ವಯಂಸೇವಕರಾಗಿ ತೊಡಗಿಸಿಕೊಂಡಿದ್ದರು.