ಸೋಮವಾರಪೇಟೆ, ಸೆ.೧೨ : ಶ್ರೀ ನಾರಾಯಣಗುರು ಸೇವಾ ಸಮಿತಿ ಹಾಗೂ ತುಳುನಾಡು ಬಿಲ್ಲವ ಮಹಿಳಾ ಸಂಘದ ಸಹಯೋಗದಲ್ಲಿ ತಾ. ೧೪ರಂದು(ನಾಳೆ) ಸ್ಥಳೀಯ ಮಾನಸ ಸಭಾಂಗಣದಲ್ಲಿ ಆಟಿ ಸಂಭ್ರಮೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ ೮ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಬಿ.ಆರ್. ಚಂದ್ರಹಾಸ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಮಂತರ್ ಗೌಡ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಮಾಜೀ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಲಿಂಗಪ್ಪ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಎ.ಎನ್. ಪದ್ಮನಾಭ್, ಡಿವೈಎಸ್‌ಪಿ ಮಹೇಶ್‌ಕುಮಾರ್, ಮುಖ್ಯ ಭಾಷಣಕಾರರಾಗಿ ರಾಜ್ಯ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಇಂದಿರಾ ಮೋಣಪ್ಪ ತಿಳಿಸಿದ್ದಾರೆ.