ಮಡಿಕೇರಿ, ಸೆ. ೧೨: ಮುಂಬರುವ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಸಂದರ್ಭದಲ್ಲಿ ಡಿಜೆ, ಲೇಸರ್ ಲೈಟ್‌ಗಳು ಹಾಗೂ ಹೊಗೆ ಯಂತ್ರಗಳನ್ನು ಬಳಸಲು ಅವಕಾಶ ನೀಡದಂತೆ ಕೊಡಗು ಜಿಲ್ಲಾಡಳಿತ ಹಾಗೂ ಮಡಿಕೇರಿ ದಸರಾ ಸಮಿತಿಗೆ ಹಿರಿಯ ವಕೀಲ ಅಮೃತೇಶ್ ಪರ ವಕೀಲರು ಪತ್ರ ಬರೆದು ವಿನಂತಿಸಿದ್ದಾರೆ. ಕೊಡಗು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಪರಿಸರ ಅಧಿಕಾರಿ ಹಾಗೂ ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದಿರುವ ಅಮೃತೇಶ್, ಕಳೆದ ಎರಡು ವರ್ಷಗಳಲ್ಲಿ ದಸರಾ ಮಂಟಪಗಳ ಸಮಿತಿಗಳು ಕಾನೂನು ಉಲ್ಲಂಘಿಸಿದ್ದು, ಈ ಬಾರಿ ಮತ್ತೆ ಕಾನೂನನ್ನು ಕೈಗೆತ್ತಿಕೊಂಡಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಹಿಂದಿನ ಘಟನೆಗಳ ಬಗ್ಗೆ ವಿವರಿಸುವುದಾಗಿ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಳೆದ ಎರಡು ವರ್ಷಗಳಲ್ಲಿ ಡಿಜೆ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು ಕೂಡ, ಕೊಡಗು ಪ್ರಾದೇಶಿಕ ಪರಿಸರ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜಿಲ್ಲಾಡಳಿತದ ಗಮನ ಸೆಳೆದಿರುವ ವಕೀಲೆ, ಪರಿಸರ ಇಲಾಖೆಯ ವತಿಯಿಂದಲೇ ನೇರವಾಗಿ ಮೊಕದ್ದಮೆ ಹೂಡಬಹುದಾದರೂ ಅವರು ಅದನ್ನು ಮುಚ್ಚಿ ಶಬ್ದ ವಿಶ್ಲೇಷಣೆಯ ವಿವರವನ್ನು ಜಿಲ್ಲಾ ಆಡಳಿತಕ್ಕೆ ರವಾನಿಸಿ ಸುಮ್ಮನಾಗಿದ್ದಾರೆ ಎಂದು ದೂರಿದ್ದಾರೆ.
ಹಿಂದಿನ ಎರಡು ವರ್ಷಗಳ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಬಾರಿಯ ದಸರಾ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ದಶಮಂಟಪಗಳು ಕಾನೂನು ಮೀರದಂತೆ ಕ್ರಮ ಕೈಗೊಳ್ಳಬೇಕೆಂದು ಅಮೃತೇಶ್ ಪರ ವಕೀಲೆ ಆಗ್ರಹಿಸಿದ್ದಾರೆ.