ಕುಶಾಲನಗರ, ಸೆ. ೧೨: ಬೀದಿ ನಾಯಿಗಳ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆ ಸಮಿತಿ ರಚನೆಗೆ ಕ್ರಮ ವಹಿಸಲು ಕುಶಾಲನಗರ ಪುರಸಭೆ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು.
ಬೀದಿ ನಾಯಿಗಳ ಉಪಟಳ ನಿಯಂತ್ರಿಸುವ ಕುರಿತು ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ಬೆನ್ನಲ್ಲೆ ಪ್ರಾಣಿಗಳ ಸಂತಾನ ನಿಯಂತ್ರಣಕ್ಕೆ ಮತ್ತು ರೇಬಿಸ್ ವಿರೋಧಿ ಲಸಿಕೆ (ಎಬಿಸಿ, ಎಆರ್‌ವಿ) ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿ ರಚಿಸಲು ಆಯಾ ಸ್ಥಳಿಯ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ಕ್ರಿಯಾ ಯೋಜನೆ ರೂಪಿಸುವ ಬಗ್ಗೆ ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು.
ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಯಿಗಳನ್ನು ಹಿಡಿದ ಬಳಿಕ ಸಂತಾನ ನಿಯಂತ್ರಣ ಲಸಿಕೆ ನೀಡಿದ ನಂತರ ಅದೇ ಪ್ರದೇಶಕ್ಕೆ ಮತ್ತೆ ಬಿಡಬೇಕು. ತಕ್ಷಣದಿಂದಲೇ ಬೀದಿ ನಾಯಿಗಳ ಸಮೀಕ್ಷೆ ಕೈಗೊಳ್ಳಬೇಕು. ಪ್ರತಿ ೩ ವರ್ಷಕ್ಕೊಮ್ಮೆ ಗಣತಿ ನಡೆಸಬೇಕು. ಮಾನ್ಯತೆ ಪಡೆದ ಏಜೆನ್ಸಿಗಳಿಗೆ ಮಾತ್ರ ಎಬಿಸಿ ಮತ್ತು ಎಆರ್‌ವಿ ಅನುಷ್ಠಾನಗೊಳಿಸಲು ಜವಾಬ್ದಾರಿ ವಹಿಸಬೇಕು. ಅಕ್ರಮಣಕಾರಿ ಮತ್ತು ರೇಬಿಸ್‌ನಿಂದ ಬಳಲುತ್ತಿರುವ ನಾಯಿಗಳನ್ನು ಆಶ್ರಯ ಕೇಂದ್ರಗಳಲ್ಲಿರಿಸಬೇಕು.
ಬೀದಿ ನಾಯಿಗಳಿಗೆ ಪುನರ್ವಸತಿ ಕಲ್ಪಿಸಲು ಅಗತ್ಯ ಜಾಗ ಗುರುತಿಸಲು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ನಿರ್ವಹಣೆ ಮತ್ತು ಸಾರ್ವಜನಿಕರ ದೂರುಗಳು, ನಿಯಮ ಉಲ್ಲಂಘನೆ ದೂರು ಸ್ವೀಕರಿಸಲು ಸಹಾಯವಾಣಿ ಸ್ಥಾಪಿಸಬೇಕು. ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿರುವ ನಾಗರಿಕರಿಗೆ ಚಿಕಿತ್ಸಾ ವೆಚ್ಚ, ಮರಣ ಸಂಭವಿಸಿದರೆ ಪರಿಹಾರ ನೀಡಲು ಕ್ರಮ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಬಾರದು. ಹೀಗೆ ವಿವಿಧ ಷರತ್ತು ವಿಧಿಸಿ ಸಮಿತಿ ರಚಿಸಲು ಸರ್ಕಾರ ಆದೇಶ ಹೊರಡಿಸಿರುವುದಾಗಿ ಗಿರೀಶ್ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿ ರಚಿಸಲು ಅನುಮೋದನೆ ನೀಡಲಾಯಿತು. ಪಶುಸಂಗೋಪನೆ ಇಲಾಖೆ ಮಾಹಿತಿ ಪ್ರಕಾರ ಅಂದಾಜು ೩೨೦ಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಇವುಗಳ ನಿಯಂತ್ರಣ ಸವಾಲಾಗಿದೆ.
ಪ್ರಸಕ್ತ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ೨೫೦ ನಾಯಿಗಳ ಸಂತಾನ ಹರಣ, ಪೋಷಣೆ ಬಗ್ಗೆ ಕ್ರಿಯಾಯೋಜನೆ ರೂಪಿಸಿ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಚರ್ಚೆ ನಡೆಯಿತು.
ತಾ. ೨೮ ರಂದು ರೇಬಿಸ್ ದಿನಾಚರಣೆ ಆಚರಣೆಯೊಂದಿಗೆ ಅಂದಿನಿAದ ಅಕ್ಟೋಬರ್ ೭ರ ತನಕ ಪಶುಪಾಲನಾ ಇಲಾಖೆಯಲ್ಲಿ ಎಲ್ಲಾ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಇಂಜೆಕ್ಷನ್ ನೀಡುವುದು, ಪೌರಕಾರ್ಮಿಕರ ಮಕ್ಕಳಿಗೆ ನಾಯಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಈ ಬಗ್ಗೆ ಸಭೆ ನಿರ್ಣಯ ಕೈಗೊಂಡಿದೆ.
ವಿಶೇಷ ಸಮಿತಿಯ ಅಧ್ಯಕ್ಷರಾಗಿ ಪುರಸಭೆ ಮುಖ್ಯ ಅಧಿಕಾರಿಗಳು, ಸದಸ್ಯ ಕಾರ್ಯದರ್ಶಿಯಾಗಿ ಹಿರಿಯ ಆರೋಗ್ಯ ನಿರೀಕ್ಷಕರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಅಧಿಕಾರಿಗಳು, ಪಶುಪಾಲನ ಇಲಾಖೆಯ ವೈದ್ಯಾಧಿಕಾರಿಗಳನ್ನು ಸೇರಿದಂತೆ ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದಲ್ಲಿರುವ ಪ್ರಾಣಿ ದಯಾ ಸಂಘದ ಸದಸ್ಯರನ್ನು ಸಮಿತಿಗೆ ಸೇರಿಸಿಕೊಳ್ಳುವಂತೆ ಸಭೆ ನಿರ್ಣಯ ಕೈಗೊಂಡಿತು.
ಈ ಸಂದರ್ಭ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ತಾಲೂಕು ವೈದ್ಯಾಧಿಕಾರಿ ಡಾ. ಇಂಧುಧರ್, ಪಶು ವೈದ್ಯಾಧಿಕಾರಿ ಡಾ. ಸಂಜೀವ್ ಕುಮಾರ್ ಶಿಂಧ್ಯ, ಹಿರಿಯ ಆರೋಗ್ಯಾಧಿಕಾರಿ ಉದಯ್ ಕುಮಾರ್ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.