ಶ್ರೀಮಂಗಲ, ಸೆ. ೧೨: ಪೊನ್ನಂಪೇಟೆಯ ನಂ.೫೬೨ ಇಗ್ಗುತಪ್ಪ ಕೊಡವ ಸೌಹಾರ್ದ ಸಹಕಾರ ಸಂಘವು ೨೦೨೪- ೨೫ರ ಸಾಲಿನ ಆರ್ಥಿಕ ವರ್ಷದಲ್ಲಿ ರೂ.೧೨೧. ೭೪ ಕೋಟಿ ವ್ಯವಹಾರ ಮಾಡಿ, ರೂ.೩೨.೪೫ ಲಕ್ಷ ಲಾಭವನ್ನು ಗಳಿಸಿದ್ದು ಸದಸ್ಯರಿಗೆ ಶೇಕಡ ೧೨ರ ಡಿವಿಡೆಂಡನ್ನು ಮಹಾಸಭೆಯಲ್ಲಿ ಘೋಷಣೆ ಮಾಡಲಾಗುತ್ತದೆ ಹಾಗೂ ಆಡಿಟ್ ‘ಎ’ ವರ್ಗೀಕರಣ ಹೊಂದಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಅರಮಣಮಾಡ ಬೋಪಯ್ಯ ಅವರು ತಿಳಿಸಿದರು.

ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಅತ್ಯಂತ ಪಾರದರ್ಶಕತೆಯಿಂದ ಕೆಲಸ ಕಾರ್ಯಗಳು ನಡೆಯುತ್ತಿದೆ. ಸಹಕಾರಿಯ ಸದಸ್ಯರಿಂದಲೂ, ಸದಸ್ಯರೇತರರಿಂದಲೂ ನಿರಖು ಠೇವಣಿ, ಸಂಚಯ ಠೇವಣಿ, ದೈನಂದಿನ ಠೇವಣಿ ಹೀಗೆ ವಿವಿಧ ರೀತಿಯ ಠೇವಣಿಯಾಗಿ ರೂ.೩೦.೨೮ ಕೋಟಿ ಠೇವಣಿ ಸಂಫ ಹೊಂದಿರುತ್ತದೆ. ಸಂಸ್ಥೆಯು ಕಳೆದ ಸಾಲಿಗಿಂತ ಶೇಕಡ ೨೫ ರಷ್ಟು ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು.

ಸದಸ್ಯರಿಗೆ ಮತ್ತು ಸದಸ್ಯರೇತರಿಗೆ ವಿವಿಧ ರೀತಿಯ ಸಾಲಗಳನ್ನು - ಅಂದರೆ ವ್ಯವಸಾಯ ಅಭಿವೃದ್ಧಿ ಸಾಲ, ಆಭರಣ ಸಾಲ, ಗೃಹ ನಿರ್ಮಾಣ ಸಾಲ, ಪಿಗ್ಮಿ ಸಾಲ, ವಾಹನ ಸಾಲ, ಕೃಷಿ ಯಂತ್ರೋಪಕರಣ ಸಾಲ ಸೇರಿ ರೂ ೨೫.೮೧ ಕೋಟಿ ಸಾಲ ವಿತರಿಸಲಾಗಿದೆ. ಸಾಲಗಳ ವಸೂಲಾತಿಯು ಶೇಕಡ ೯೨ ರಷ್ಟು ಆಗಿರುತ್ತದೆ. ಇದಕ್ಕೆ ಆಡಳಿತ ಮಂಡಳಿಯ ನಿಯಮ ಬದ್ಧ ಸೇವೆ, ಕಾನೂನು ಬದ್ಧವಾಗಿದ್ದು ಹಾಗೂ ಸದಸ್ಯರ ಸಹಕಾರದಿಂದಲೂ ಅಭಿವೃದ್ಧಿ ಹೊಂದುತ್ತಿರುವುದಾಗಿದೆ ಎಂದು ಅವರು ವಿವರಿಸಿದರು.

ಸಂಘದಲ್ಲಿ ಠೇವಣಾತಿ ಭದ್ರತೆ ದೃಷ್ಟಿಯಿಂದ ಇತರ ಬ್ಯಾಂಕುಗಳಲ್ಲಿ ರೂ.೮.೪೩ ಕೋಟಿ ವಿನಿಯೋಗ ಮಾಡಲಾಗಿದೆ. ಇತರ ವಾಣಿಜ್ಯ ಬ್ಯಾಂಕು ಮತ್ತು ರಿಸರ್ವ್ ಬ್ಯಾಂಕ್ ನಂತೆ ಎಸ್.ಎಲ್.ಆರ್ ಶೇ. ೨೦ರಷ್ಟು ಠೇವಣಿಯನ್ನು ಇತರ ಬ್ಯಾಂಕಿನಲ್ಲಿ ತೊಡಗಿಸಿ ಠೇವಣಿ ಭದ್ರತೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಪೊನ್ನಂಪೇಟೆ ಹೃದಯ ಭಾಗದಲ್ಲಿ ಸ್ವಂತ ಕಟ್ಟಡವನ್ನು ಸಂಸ್ಥೆ ಹೊಂದಿರುತ್ತದೆ. ಸಂಸ್ಥೆಯ ಸದಸ್ಯರು ಇನ್ನಿತರ ಸೌಲಭ್ಯಗಳಾದ ಮರಣನಿಧಿ ರೂ. ೧೦ ಸಾವಿರ ಹಾಗೂ ಸಹಕಾರಿ ಜೀವ ನಿಧಿ ರೂ. ೧ ಲಕ್ಷ ಅವರ ನಾಮಿನಿಗೆ ಮೃತಪಟ್ಟ ನಂತರ ಕೊಡಲಾಗುವುದು. ಅದು ಅಲ್ಲದೆ ಸಾಲಗಾರರ ಹಿತದೃಷ್ಟಿಯಿಂದ ಸಾಲಗಾರನು ಸಾಲ ಪಡೆದು ಸುಸ್ತಿಯಾಗದೇ ಮೃತಪಟ್ಟಲ್ಲಿ ಸಾಲಗಾರ ಕ್ಷೇಮ ಅಭಿವೃದ್ದಿ ನಿಧಿಯಿಂದ ನಿಬಂಧನೆಗೆ ಒಳಪಟ್ಟು ಒಂದು ಲಕ್ಷ ಮಿತಿಯೊಳಗೆ ಮನ್ನಾ ಮಾಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ರೂ.೨.೪೩ಲಕ್ಷ ಹಣವನ್ನು ಏಳು ಜನ ಮೃತಪಟ್ಟ ಸಾಲಗಾರ ಸದಸ್ಯರ ಸಾಲ ಮನ್ನಾ ಮಾಡಲಾಗಿರುತ್ತದೆ. ಇದು ಯಾವುದೇ ಸಹಕಾರಿ ಸಂಸ್ಥೆಯಲ್ಲಿ ಇಲ್ಲದ ಈ ವ್ಯವಸ್ಥೆ ನಮ್ಮ ನಮ್ಮ ಸಂಘದಲ್ಲಿ ಅಳವಡಿಸಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಸಂಘದ ವಾರ್ಷಿಕ ಮಹಾಸಭೆಯು ತಾ.೧೫ ರಂದು ಸಂಘದ ಸಭಾಂಗಣದಲ್ಲಿ ನಡೆಸಲಾಗುವುದು ಎಂದರು. ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚಿರಿಯಪಂಡ ಕೆ. ಕಾಶಿಯಪ್ಪ, ನಿರ್ದೇಶಕರುಗಳಾದ ಕಬ್ಬಚ್ಚಿರ ಎಂ. ಚಿದಂಬರ, ಕೆ.ಜಿ. ಕುಶಾಲಪ್ಪ, ಎಂ.ಪಿ. ಪ್ರಕಾಶ್, ಐ.ಕೆ. ಮಂದಣ್ಣ, ಕೆ.ಡಿ. ಪೂಣಚ್ಚ, ಜಿ.ಎಸ್. ಗಂಗಮ್ಮ, ಸಿ.ಪಿ. ಆಶಾ, ಕೆ.ಎಸ್. ಸುರೇಶ್, ಕೆ.ಎನ್. ಕಾವೇರಪ್ಪ, ಎಂ. ಜಿ. ಪಾರ್ವತಿ, ಹಾಗೂ ಸಂಘದ ಸಿ.ಇ.ಒ ಎಂ.ಎಸ್. ಗಣಪತಿ ಹಾಜರಿದ್ದರು.