ವೀರಾಜಪೇಟೆ, ಸೆ. ೧೨: ವೀರಾಜಪೇಟೆ ಪಟ್ಟಣದ ತ್ಯಾಜ್ಯದಿಂದ ಆರ್ಜಿ ಗ್ರಾಮದಲ್ಲಿ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತೀಮಾ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರ್ಜಿ ಗ್ರಾಮದ ಗದ್ದೆಗಳಿಗೆ ವೀರಾಜಪೇಟೆ ಪಟ್ಟಣದ ತ್ಯಾಜ್ಯವನ್ನು ಮತ್ತು ಶೌಚಾಲಯದ ತ್ಯಾಜ್ಯವನ್ನು ತೋಡು ಮೂಲಕ ಹರಿಯಬಿಟ್ಟು ಆರ್ಜಿ ಗ್ರಾಮದ ರೈತರಿಗೆ ಭತ್ತ ಕೃಷಿ ಮಾಡದಂತೆ ಆಗಿದೆ ಎಂದು ಅವರು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಚಾರವಾಗಿ ವೀರಾಜಪೇಟೆ ಪುರಸಭೆ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದರೂ ಯಾವುದೇ ಕ್ರಮ ಆಗಲಿಲ್ಲ. ಗ್ರಾಮಸ್ಥರ ಕೋರಿಕೆಯಂತೆ ಪುನಃ ಸ್ಥಳ ಪರಿಶೀಲನೆಯನ್ನು ಮಾಡಲಾಗಿದ್ದು, ಮುಂದಿನ ಗ್ರಾಮಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಫಾತಿಮಾ ಹೇಳಿಕೆ ನೀಡಿದರು.

ತ್ಯಾಜ್ಯ ತುಂಬಿದ ಈ ತೋಡು ಹರಿದು ಕಾವೇರಿ ನದಿಗೆ ಸೇರ್ಪಡೆಗೊಳ್ಳುತ್ತದೆ. ಈ ನೀರನ್ನು ನಮ್ಮ ಜಿಲ್ಲೆ ಮಾತ್ರವಲ್ಲದೆ ಇತರೆ ಜಿಲ್ಲೆಗಳ, ರಾಜ್ಯಗಳ ಜನರು, ಜಾನುವಾರುಗಳು ಕೂಡ ಬಳಸುತ್ತವೆ. ಕುಡಿಯುವ ನೀರಿಗೆ ತ್ಯಾಜ್ಯ ನೀರು ಬಿಟ್ಟು ನೀರನ್ನು ಮಾಲಿನ್ಯ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದರು. ಈ ನೀರಿನಲ್ಲಿ ಕೆಲಸ ಮಾಡಿದರೆ ಕಾಲಿಗೆ ಅಲರ್ಜಿಯಾಗುತ್ತಿದ್ದು ಇದರಿಂದ ಶ್ರಮಿಕರು ಬಾರದೆ ಗದ್ದೆಯನ್ನು ಈ ಬಾರಿ ಪಾಳು ಬಿಡುವಂತಾಗಿದೆ. ಇದರಿಂದ ಜನರಿಗೆ ಆಹಾರದ ಕೊರತೆ ಮತ್ತು ದನಕರುಗಳಿಗೆ ಮೇವಿನ ಕೊರತೆ ಉಂಟಾಗುತ್ತದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದರು.

ಸ್ಥಳ ಪರಿಶೀಲನೆ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕವಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಕಾರ್ಯದರ್ಶಿ ರಾಜನ್, ಸಿಬ್ಬಂದಿಗಳು ಮತ್ತು ಗ್ರಾಮದ ರೈತರಾದ ಕೀತಿಯಂಡ ಪ್ರತಾಪ್, ಅಯ್ಯಪ್ಪ ಹಾಜರಿದ್ದರು.