ಸೋಮವಾರಪೇಟೆ, ಸೆ. ೪: ಈಗಾಗಲೇ ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸುವಂತೆ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ, ಬಂದ್ ನಡೆದಿದ್ದು, ಇದೀಗ ಯಾವುದೇ ಅಧಿಸೂಚಿತ ಇಲ್ಲದೇ ಸರ್ಕಾರಿ ಪೈಸಾರಿ ಜಮೀನಿನ ಆರ್ಟಿಸಿಯಲ್ಲಿ ಅರಣ್ಯ ಇಲಾಖೆಯ ಹೆಸರು ನಮೂದು ಮಾಡಲಾಗುತ್ತಿದೆ ಎಂದು ರೈತ ಹೋರಾಟ ಸಮಿತಿ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅವರು, ಸೋಮವಾರಪೇಟೆ ತಾಲೂಕಿನ ನೇಗಳ್ಳೆ ಕರ್ಕಳ್ಳಿ ಗ್ರಾಮದಲ್ಲಿ ಅನೇಕ ದಶಕಗಳಿಂದ ಸರ್ಕಾರಿ ಪೈಸಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ಜಾಗವನ್ನು ಯಾವುದೇ ಅಧಿಸೂಚಿತ ಇಲ್ಲದೇ ಅರಣ್ಯ ಇಲಾಖೆಯ ಹೆಸರನ್ನು ನಮೂದು ಮಾಡಲಾಗಿದೆ. ಗ್ರಾಮದ ೨೨೬/೨ರಲ್ಲಿ ೭೦ ಏಕರೆ, ೨೩೫ರಲ್ಲಿ ೩೬ ಏಕರೆ ಜಮೀನಿಗೆ ಸಂಬAಧಿಸಿದAತೆ ಆರ್ಟಿಸಿಯ ಪಟ್ಟಾ ಕಾಲಂನಲ್ಲಿ ಅರಣ್ಯ ಇಲಾಖೆ ಎಂದು ನಮೂದಿಸಲಾಗಿದೆ ಎಂದು ದೂರಿದರು.
ರೈತರು ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಜಾಗಕ್ಕೆ ಈಗಾಗಲೇ ಫಾರಂ ೫೦, ೫೩, ೯೪ ಸಿ ಸೇರಿದಂತೆ ಗುತ್ತಿಗೆ ಆಧಾರದ ಮೇಲೆ ಪಡೆಯುವ ಯೋಜನೆಯಡಿ ಈಗಾಗಲೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ನಡುವೆ ಕಳೆದ ೨೦೦೦ ಇಸವಿಯವರೆಗೂ ಸರ್ಕಾರಿ ಪೈಸಾರಿ ಎಂದು ದಾಖಲಾಗಿದ್ದ ಜಾಗದ ಆರ್ಟಿಸಿ ಇದೀಗ ದಿಢೀರಾಗಿ ಅರಣ್ಯ ಇಲಾಖೆ ಎಂದು ಪಟ್ಟಾ ಕಾಲಂನಲ್ಲಿ ದಾಖಲಾಗಿದೆ. ಕೃಷಿಕರ ಜಾಗವನ್ನು ಅರಣ್ಯವನ್ನಾಗಿ ಮಾರ್ಪಡಿಸುವ ಹುನ್ನಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಯಾವುದೇ ಒಂದು ಭೂಮಿಯನ್ನು ಅರಣ್ಯ ಇಲಾಖೆಗೆ ಒಳಪಡಿಸುವ ಮೊದಲು ಸೆಕ್ಷನ್ ೧ರಿಂದ ಸೆಕ್ಷನ್ ೧೭ರವರೆಗೆ ನೋಟಿಫಿಕೇಷನ್ಗಳು ಆಗಬೇಕು. ಇದೀಗ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಕೆಲವು ಗ್ರಾಮಗಳಿಗೆ ಸೆಕ್ಷನ್೪ ಅಡಿಯಲ್ಲಿ ನೋಟೀಸ್ ನೀಡುತ್ತಿದ್ದಾರೆ. ಈ ನಡುವೆ ನೇಗಳ್ಳೆ ಕರ್ಕಳ್ಳಿ ಗ್ರಾಮದಲ್ಲಿ ಸುಮಾರು ೧೦೬ ಎಕರೆ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲು ಆರ್ಟಿಸಿ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಯಾವುದಾದರೂ ಆದೇಶ ಮಾಡಿದ್ದರೆ ಅರಣ್ಯ ಇಲಾಖೆ ಬಹಿರಂಗಪಡಿಸಬೇಕೆAದು ಸುರೇಶ್ ಆಗ್ರಹಿಸಿದರು.
ರೈತ ವಿರೋಧಿ ಕ್ರಮದ ವಿರುದ್ಧ ರೈತ ಹೋರಾಟ ಸಮಿತಿ ನಿರಂತರ ಹೋರಾಟ ಮಾಡಲಿದೆ. ಈವರೆಗೆ ಹೋರಾಟ ಮಾಡಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನ ಲಭಿಸಿಲ್ಲ. ಸದನದಲ್ಲಿ ಶಾಸಕ ಮಂತರ್ ಗೌಡ ಅವರು ಸರ್ಕಾರದ ಗಮನ ಸೆಳೆಯುವ ಸಂದರ್ಭ ಸಭಾಧ್ಯಕ್ಷರು ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿಲ್ಲ ಎಂದರು.
ಹರಗ ಗ್ರಾಮದಲ್ಲಿ ೨೪/೮, ೩೪/೧೨, ೩೪/೧೮, ೩೪/೬, ೩೪/೮ ಸರ್ವೆ ನಂಬರ್ನ ಜಾಗವನ್ನು ಡೀಮ್ಡ್ ಫಾರೆಸ್ಟ್ಗಾಗಿ ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಜಂಟಿ ಸರ್ವೆಗೆ ಅಧಿಕಾರಿಗಳು ಆಗಮಿಸಿದ್ದರು. ಆದರೆ ಹರಗ ಗ್ರಾಮದಲ್ಲಿ ಈ ಸರ್ವೆ ನಂಬರ್ನ ಜಾಗಗಳೇ ಇಲ್ಲ. ಅರಣ್ಯ ಇಲಾಖೆ ಬೇಕಾಬಿಟ್ಟಿ ಸರ್ವೆ ನಂಬರ್ಗಳನ್ನು ನಮೂದಿಸಿ ರೈತರ ನಿದ್ದೆಗೆಡಿಸುತ್ತಿದೆ ಎಂದು ದೂರಿದರು. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಈ ಭಾಗದ ರೈತರು ಮತದಾನ ಮಾಡಬೇಕೋ ಬೇಡವೋ ಎಂಬ ಬಗ್ಗೆಯೂ ಚಿಂತಿಸಬೇಕಾಗಿದೆ. ಈ ಬಗ್ಗೆ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸುರೇಶ್ ತಿಳಿಸಿದರು.
ಸಮಿತಿಯ ಸಂಚಾಲಕ ಬಿ.ಜೆ. ದೀಪಕ್ ಮಾತನಾಡಿ, ಒಂದೇ ಜಾಗಕ್ಕೆ ಸೆಕ್ಷನ್-೪, ಸಿ ಮತ್ತು ಡಿ, ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಎಂದು ನಮೂದಾಗಿದೆ. ಜಂಟಿ ಸರ್ವೆ ಮಾಡಿದರೆ ಯಾವ ಜಾಗ ಎಲ್ಲಿದೆ ಎಂಬ ಬಗ್ಗೆ ನಿಖರತೆ ಲಭಿಸಲಿದೆ. ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಲು ಕೆಲಸ ಮಾಡಬಾರದು. ಸ್ಥಳೀಯ ರೈತರ ಪರವಾಗಿ ನಿಲುವು ತಾಳಬೇಕು ಎಂದರು.
ಸಿ ಮತ್ತು ಡಿ ಜಾಗವನ್ನು ಲ್ಯಾಂಡ್ ಬ್ಯಾಂಕ್ಗೆ ಹಸ್ತಾಂತರಿಸುವ ಸಂಬAಧ ಕಳೆದ ೨೦೧೭ರಲ್ಲಿಯೇ ಸರ್ಕಾರ ಕೆಲ ನಿಬಂಧನೆಗಳನ್ನು ಹಾಕಿದೆ. ಯಾವುದೇ ಸಂದರ್ಭದಲ್ಲೂ ಈ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆದುಕೊಳ್ಳುವ ಬಗ್ಗೆ ವಿಧಾನ ಸಭೆಯಲ್ಲಿ ತೀರ್ಮಾನವಾಗಿದೆ. ಈ ಆದೇಶವನ್ನು ಅರಣ್ಯ ಇಲಾಖೆ ಪಾಲಿಸಬೇಕೆಂದರು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೂತಿ ದಿನೇಶ್ ಮಾತನಾಡಿ, ಸಮಸ್ಯೆಯ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಮಂತರ್ ಗೌಡ ದನಿಯೆತ್ತಿದ ಸಂದರ್ಭ ಮಲೆನಾಡು ಭಾಗದ ಇತರ ಶಾಸಕರು, ವಿರೋಧ ಪಕ್ಷದ ಶಾಸಕರುಗಳು ಯಾವುದೇ ಬೆಂಬಲ ನೀಡಿಲ್ಲ. ರೈತರ ಮತಗಳಿಂದ ಶಾಸಕರುಗಳು ಆಯ್ಕೆಯಾಗುತ್ತಾರೆಯೇ ಹೊರತು ಅರಣ್ಯ ಇಲಾಖೆಯಿಂದಲ್ಲ ಎಂಬುದನ್ನು ಮಲೆನಾಡು ಭಾಗದ ಶಾಸಕರು ತಿಳಿದುಕೊಳ್ಳಬೇಕೆಂದರು. ಈ ಹಿಂದೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭ ಮುಂದಿನ ೧೦ ದಿನಗಳ ಒಳಗೆ ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದರು. ಈ ಭರವಸೆ ನೀಡಿ ೧೫ ದಿನಗಳಾದರೂ ಸಮಿತಿ ರಚನೆ ಮಾಡಿಲ್ಲ ಎಂದು ದಿನೇಶ್ ದೂರಿದರು. ಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿಯ ಬಿ.ಎಂ. ಸುರೇಶ್, ಎಸ್.ಎಂ. ಡಿಸಿಲ್ವಾ ಇದ್ದರು.