ಗೋಣಿಕೊಪ್ಪಲು. ಸೆ.೪: ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯ ನೂತನ ಸಾಲಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಒಮ್ಮತ ಮೂಡದ ಹಿನ್ನೆಲೆ ದಸರಾ ಸಮಿತಿ ಇಬ್ಬಾಗವಾಗಿದೆ. ಆಡಳಿತ ಪಕ್ಷದ ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಕುಲ್ಲಚಂಡ ಪ್ರಮೋದ್ ಗಣಪತಿ ತಾನೇ ಮುಂದಿನ ಸಾಲಿನ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷನಾಗಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.

ಇತ್ತ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ರಾಮಕೃಷ್ಣ ಅವರು ಗ್ರಾಮ ಪಂಚಾಯಿತಿಯ ನಿಯಮದಂತೆ ಸದಸ್ಯರ ಬಹುಮತ ಆಯ್ಕೆ ನನ್ನ ಪರವಾಗಿರುವ ಹಿನ್ನೆಲೆ ಮುಂದೆ ಬರುವ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಎರಡು ತಂಡಗಳು ಅಧ್ಯಕ್ಷಗಾದಿಗಾಗಿ ತೀವ್ರ ಪೈಪೋಟಿ ನಡೆಸಿದ್ದವು. ಕಾವೇರಿ ದಸರಾ ಸಮಿತಿಯ ಮಹಾಸಭೆಯಲ್ಲಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ತೀವ್ರ ಗೊಂದಲ ನಿರ್ಮಾಣವಾಗಿತ್ತು. ಸಭೆಯಲ್ಲಿ ಅಧ್ಯಕ್ಷರ ಆಯ್ಕೆಗೆ ಒಮ್ಮತ ಮೂಡಿರಲಿಲ್ಲ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಗ್ರಾಮ ಪಂಚಾಯಿತಿ ಸದಸ್ಯರ ತುರ್ತು ಸಭೆಯನ್ನು ಸೆ.೪ ಸಂಜೆ ೪ ಗಂಟೆಗೆ ಕರೆದಿದ್ದರು.

ಸಭೆಗೆ ಕಾಂಗ್ರೆಸ್ ಬೆಂಬಲಿತ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ಆಗಮಿಸಿದ್ದರು. ಸಭೆಯಲ್ಲಿ ಹಾಲಿ ಅಧ್ಯಕ್ಷರಾದ ಪ್ರಮೋದ್ ಗಣಪತಿ ದಸರಾ ಸಮಿತಿಯ ಅಧ್ಯಕ್ಷರಾಗಿ ತನ್ನನ್ನೇ ಆಯ್ಕೆ ಮಾಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು. ಆದರೆ ಬಿಜೆಪಿ ಸದಸ್ಯರು ಇವರ ಮಾತಿಗೆ ಮನ್ನಣೆ ನೀಡಲಿಲ್ಲ. ಇದರಿಂದಾಗಿ ಸಭೆಯಿಂದ ಹೊರನಡೆದು ಬಂದ ಇವರು ತಮ್ಮ ಅಧ್ಯಕ್ಷರ ಕೊಠಡಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ದಸರಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉದಾಹರಣೆ ಇದೆ. ಹೀಗಾಗಿ ತಾನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತೇನೆ, ಇಂದಿನಿAದಲೇ ದಸರಾ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತದೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ದೇವಿಯ ಕಾರ್ಯ ನಡೆಸುವುದಾಗಿ ತಿಳಿಸಿದರು. ಮತ್ತೊಂದು ಕೊಠಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗ್ರಾ.ಪಂ.ಸದಸ್ಯ ರಾಮಕೃಷ್ಣ ಹಾಗೂ ಇತರೆ ಬಿಜೆಪಿ ಬೆಂಬಲಿತ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಸ್ಥಾನ ಬಹುಮತವನ್ನು ಹೊಂದಿ ಅಧ್ಯಕ್ಷ ಸ್ಥಾನ ಪಡೆದಿದ್ದೇವೆ. ಶಾಸಕ ಎ.ಎಸ್. ಪೊನ್ನಣ್ಣ ಅವರ ಬಳಿ ನಿಯೋಗ ತೆರಳಿ ಸಾಂಪ್ರದಾಯಿಕವಾಗಿ ಆಹ್ವಾನ ನೀಡುವ ಮೂಲಕ ದಸರಾ ಯಶಸ್ಸಿಗೆ ಮನವಿ ಸಲ್ಲಿಸಲಿದ್ದೇವೆ. ಇಂದಿನಿAದಲೇ ದಸರಾ ಕಾರ್ಯಕ್ರಮ ಚಟುವಟಿಕೆಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದರು. ಎರಡು ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು.