ಸೋಮವಾರಪೇಟೆ, ಸೆ.೧: ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಸ್ಕೌಟ್ ಹಾಗೂ ಗೈಡ್ಸ್ ಸಂಸ್ಥೆಯ ಸೇವೆ ಅನನ್ಯವಾದುದು ಎಂದು ಇಲ್ಲಿನ ಸಂತ ಜೋಸೆಫರ ವಿದ್ಯಾಸಂಸ್ಥೆಯ ಮುಖ್ಯಸ್ಥ ಫಾ. ಅವಿನಾಶ್ ಅಭಿಪ್ರಾಯಿಸಿದರು.
ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಜರುಗಿದ ಸ್ಕೌಟ್ ಮತ್ತು ಗೈಡ್ ವಾರ್ಷಿಕ ಮಹಾಸಭೆ, ದೇಶ ಭಕ್ತಿಗೀತೆ ಗಾಯನ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ರೀತಿಯಲ್ಲಿ ಸಂತೋಷ ಹಾಗೂ ಜೀವನದ ಅರ್ಥ ಕಂಡುಕೊಳ್ಳುತ್ತಾನೆ. ಪ್ರತಿಯೊಬ್ಬನ ಮನಸ್ಸು ವಿಶಿಷ್ಟವಾಗಿರುತ್ತದೆ. ಶಿಕ್ಷಣವೆಂದರೆ ವ್ಯಕ್ತಿಯಲ್ಲಿರುವ ದೈವೀಶಕ್ತಿಯ ಅನಾವರಣ. ಅದನ್ನು ಹೊರ ತೆಗೆಯುವ ಕೆಲಸ ಪೋಷಕರು, ಶಿಕ್ಷಕರು, ವಿದ್ಯಾಭಿಮಾನಿಗಳಿಂದಾಗಬೇಕು ಎಂದರು.
ಈ ನಿಟ್ಟಿನಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ನೂರಾರು ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುತ್ತಿದೆ. ಆ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ವಿದ್ಯಾರ್ಥಿ ಹಂತದಲ್ಲಿಯೇ ಮಕ್ಕಳು ಶಿಸ್ತು, ಸಂಯಮ, ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ತಾಲೂಕು ಸ್ಕೌಟ್ ಮತ್ತು ಗೈಡ್ಸ್ ಅಧ್ಯಕ್ಷ ಎಸ್. ಡಿ. ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತರಾದ ಪದ್ಮಶ್ರೀ ಪ್ರಶಸ್ತಿ ವಿಜೇತೆ ರಾಣಿ ಮಾಚಯ್ಯ, ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಕೆ. ಯು. ರಂಜಿತ್, ಜಿ.ಎಂ.ಪಿ. ಶಾಲೆಯ ಮುಖ್ಯ ಶಿಕ್ಷಕಿ ಯಶೋಧ, ಶಿಕ್ಷಣ ಇಲಾಖೆಯ ಬಿ.ಆರ್.ಸಿ. ದಯಾನಂದ್, ಉಪಾಧ್ಯಕ್ಷರುಗಳಾದ, ಶೀಲಾ ಡಿಸೋಜ, ಎಸ್.ಎಂ. ಡಿಸಿಲ್ವ, ಜೋಕಿಮ್ ವಾಸ್, ಶುಭ, ಝಮೀರ್, ಗಿರೀಶ್ ಕಾಟ್ನಮನೆ, ನಾಗರಾಜ್ ಚಿಕ್ಕತೋಳೂರು, ನಂಗಾರು ಕೀರ್ತಿ ಪ್ರಸಾದ್, ವಿವಿಧ ಶಾಲೆಗಳ ಶಿಕ್ಷಕರು, ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಜ್ಯೋತಿ ಅರುಣ್ ನಿರೂಪಿಸಿ, ಸ್ಕೌಟ್ ಮತ್ತು ಗೈಡ್ ಶಿಕ್ಷಕಿ ಚಂದ್ರಕಲಾ ವಂದಿಸಿದರು.