ಮಡಿಕೇರಿ, ಸೆ. ೧: ಕನ್ನಡಿಯನ್ನು ಕಿಟಕಿಯನ್ನಾಗಿಸುವಂತ ಪ್ರಕ್ರಿಯೆ ಶಿಕ್ಷಣ. ನಮ್ಮೊಳಗಿರುವ ಪ್ರತಿಭೆಯನ್ನು ಹೊರತರಲು ಶಿಕ್ಷಣ ಮಾರ್ಗ ಎಂದು ಕೊಡಗು ಜಿಲ್ಲಾ ಪ್ರಾಂಶುಪಾಲ ಸಂಘದ ಖಜಾಂಚಿ ಅಂತೋಣಿ ವಿಜಯನ್ ಅಲ್ವಾರೀಸ್ ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ೨೦೨೫-೨೬ ನೇ ಸಾಲಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಪ್ರಾಂಶುಪಾಲ ಸಂಘ ಬಹಳ ಸಹಕಾರಿಯಾಗಿರುವುದು ಸ್ಮರಣೀಯ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸುವುದು ಅತ್ಯಂತ ಗೌರವಯುತ ಕಾರ್ಯ. ಹಾಗೆಯೇ ಪೋಷಕರು ಅದಕ್ಕಾಗಿ ಶ್ರಮಿಸುತ್ತಿರುವುದು ಕೂಡ ಗಮನಾರ್ಹ ವಿಷಯ. ಇಲಾಖೆ ವತಿಯಿಂದ ಯುವ ಸಂಸತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ, ಇದರಲ್ಲಿ ರಾಜಕೀಯ ಪ್ರವೃತ್ತಿ ಮೇಲ್ಮನೆ ಕೆಳಮನೆ ಕಾರ್ಯ ಹೇಗೆ ನಿರ್ವಹಿಸುತ್ತದೆ ಎಂದು ತಿಳಿಸಿಕೊಡಲಾಗುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಲ್.ಚಿದಾನAದ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಧ್ಯಾಪಕರುಗಳಲ್ಲದೆ ಪೋಷಕರ ಪ್ರಯತ್ನವು ಮುಖ್ಯ ಪಾತ್ರ ವಹಿಸಿದೆ. ಕೊಡಗಿನಲ್ಲಿ ಮಳೆಯಿಂದಾಗಿ ರಜೆ ಇದ್ದರೂ ಫಲಿತಾಂಶದಲ್ಲಿ ವ್ಯತ್ಯಾಸವಾಗಲಿಲ್ಲ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೊಡಗು ನಾಲ್ಕನೇ ಸ್ಥಾನ ಪಡೆದಿದ್ದರೂ ಮುಂದಿನ ವರ್ಷಗಳಲ್ಲಿ ಮೊದಲನೇ ಸ್ಥಾನ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದಾಯನ ಎಸ್ ರಾಮಕೃಷ್ಣ ಅವರಿಗೆ ಗಣ್ಯರುಗಳು ಸನ್ಮಾನಿಸಿ ಗೌರವಿಸಿದರು.

೨೦೨೪-೨೫ ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಲಾವಿಭಾಗದಿಂದ ಅಫಿಯ ಶರೀಫ್, ಎಂ.ಆರ್. ನವನಿದನ್, ಎಸ್. ಸಾಜಿದ, ಕೆ. ಮೇಘಶ್ರೀ, ವಾಣಿಜ್ಯ ವಿಭಾಗದಿಂದ ಡಿಂಪಲ್ ತಮ್ಮಯ್ಯ, ಕೆ.ಎಸ್. ಶಿವಾನಿ, ವಿ.ಎಸ್. ನಿಕ್ಷಾ, ಡಿ.ಡಿ. ಸೃಜನ, ವಿಜ್ಞಾನ ವಿಭಾಗದಿಂದ ಟಿ.ವಿ. ವೈಷ್ಣವಿ, ಪನ್ಯ ಪೊನ್ನಮ್ಮ ಎ.ಆರ್, ಚಿತ್ರ ಪಿ, ಲಿಜಾ ಜೇಮ್ಸ್, ಮಮತಾ ಎಂ.ಪಿ, ಸಾನಿಕ ಜಾಸ್ಮಿನ್ ಪಿ, ದೀಕ್ಷಾ ದೇಚಮ್ಮ ಇವರುಗಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಆರ್.ವಿಜಯನ್, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ಖಜಾಂಚಿ ಅಂತೋನಿ ವಿಜಯನ್ ಅಲ್ವಾರೀಸ್, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಎನ್.ಕೆ ಜ್ಯೋತಿ, ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ಪಿ.ಎಂ.ದೇವಕಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಿದಾನಂದ ಕುಮಾರ್ ಎಂಎಲ್ ಮತ್ತಿತರರು ಇದ್ದರು.

ದಿವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಧ್ಯಾಪಕ ದಿವಾಕರ್ ನಿರೂಪಿಸಿದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ.ಎಂ.ದೇವಕಿ ಸ್ವಾಗತಿಸಿದರು. ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಎನ್.ಕೆ.ಜ್ಯೋತಿ ವಂದಿಸಿದರು.