ಮಡಿಕೇರಿ, ಆ. ೩೧: ನಗರದ ಬಾಲಭವನದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯಿಂದ ೫ನೇ ಹಕ್ಕೊತ್ತಾಯ ಸಮಾವೇಶ ನಡೆಯಿತು. ಸಮಾವೇಶವನ್ನು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ರೈತರು, ನೌಕರರು, ಕಾರ್ಮಿಕರ ಮೇಲೆ ದಾಳಿ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ನಾವು ಒಂದಾಗದಿದ್ದರೆ ಉಳಿಗಾಲ ಇಲ್ಲ ಎಂದರು.

ಈಗ ‘ಎಐ’ ತಂತ್ರಜ್ಞಾನ ಉತ್ಪಾದನೆ ಮತ್ತು ಸೇವಾ ರಂಗಕ್ಕೆ ಬಂದಿದೆ. ಈ ರಂಗದಲ್ಲಿ ಉದ್ಯೋಗ ಕಡಿತ ಆಗುತ್ತಿದೆ. ಪರಿಸ್ಥಿತಿ ಹೀಗಾದರೆ ನಾವು ಎಲ್ಲಿ ಹೋಗಬೇಕು? ಎಂದು ಪ್ರಶ್ನಿಸಿದ ಅವರು, ಹಾಗೆಂದು ನಾವು ತಂತ್ರಜ್ಞಾನ ವಿರೋಧಿಗಳಲ್ಲ. ತಂತ್ರಜ್ಞಾನ ನಮ್ಮ ಅನುಕೂಲಕ್ಕೆ ಬೇಕೇ ವಿನಹಾ ನಮ್ಮ ನಾಶಕ್ಕೆ ಅಲ್ಲ ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ ೭.೮೦ ಲಕ್ಷ ಹುದ್ದೆಗಳು, ಕೇಂದ್ರದಲ್ಲಿ ೫೦ ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತುಂಬಲಿಲ್ಲ, ಪ್ರಧಾನಿ ನರೇಂದ್ರ ಮೋದಿಯೂ ಭರ್ತಿ ಮಾಡಲಿಲ್ಲ.

ಎಲ್ಲರೂ ಪ್ರಜ್ಞಾಪೂರ್ವಕವಾಗಿ, ಸಂಘಟಿತರಾಗಿ ಹೋರಾಟಕ್ಕೆ ಧುಮುಕಬೇಕಿದೆ. ಆಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದರು. ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಅವರು ಈಚೆಗೆ ನಿಧನರಾದ ಹೋರಾಟಗಾರರನ್ನು ಸ್ಮರಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

ಸಂಘದ ಕುಶಾಲನಗರ ತಾಲೂಕು ಘಟಕದ ಕಾರ್ಯದರ್ಶಿ ವಿಜಯ್, ಪೊನ್ನಂಪೇಟೆ ತಾಲೂಕು ಘಟಕದ ಕಾರ್ಯದರ್ಶಿ ಮಧುಸೂದನ್, ತೋಟ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ಟಿ. ಕುಟ್ಟಪ್ಪ ಭಾಗವಹಿಸಿದ್ದರು.

ಇದೇ ವೇಳೆ ಪಂಚಾಯಿತಿ ನೌಕರರ ಸಂಘಟನೆಯ ಮುಂದಿನ ೩ ವರ್ಷಕ್ಕೆ ೯ ಜನರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಿ.ಆರ್.ಭರತ್, ಕಾರ್ಯದರ್ಶಿಯಾಗಿ ಮಧುಸೂದನ್, ಖಜಾಂಚಿಯಾಗಿ ವಸಂತ್‌ಕುಮಾರ್, ಉಪಾಧ್ಯಕ್ಷರಾಗಿ ಮಹದೇವ್, ಸಜಿತಾ, ವಿಂಧ್ಯಾ, ರಂಗಸ್ವಾಮಿ, ಉಪಕಾರ್ಯದರ್ಶಿಯಾಗಿ ದಿಲೀಪ್‌ಕುಮಾರ್ ಆಯ್ಕೆಯಾದರು.