*ಗೋಣಿಕೊಪ್ಪ, ಆ. ೩೧: ಗೋಣಿಕೊಪ್ಪ ಶಿವಾಜಿ ಯುವ ಸೇನೆ ಆಯೋಜಿಸಿದ ಎರಡನೇ ವರ್ಷದ ರಕ್ತದಾನ ಶಿಬಿರದಲ್ಲಿ ೫೮ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಉಮಾಮಹೇಶ್ವರಿ ದೇವಸ್ಥಾನ ಸಂಭಾಗಣದಲ್ಲಿ ಶಿವಾಜಿ ಯುವಸೇನೆಯ ಅಧ್ಯಕ್ಷ ಅಣ್ಣಪ್ಪ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಯುವಕರು ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.

೫೮ ಬಾರಿ ರಕ್ತದಾನ ಮಾಡಿ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ೩೭ನೇ ಸಲ ರಕ್ತದಾನ ಮಾಡಿದ ವಿ ವಿ ಅರುಣ್ ಕುಮಾರ್ ಮತ್ತು ೨೬ನೇ ಬಾರಿ ರಕ್ತದಾನ ಮಾಡುವ ಮೂಲಕ ಪ್ರಿಯಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಗೋಣಿಕೊಪ್ಪ ಭಗತ್ ಸಿಂಗ್ ಯುವಕರ ಸಂಘ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಜಾಗೃತಿ ಮೂಡಿಸಿದರು. ರಕ್ತದಾನದ ಮಹತ್ವ, ಅಪಘಾತ ಇನ್ನಿತರ ವಿಚಾರಗಳಲ್ಲಿ ಎದುರಾಗುತ್ತಿರುವ ರಕ್ತದ ಕೊರತೆ, ರಕ್ತ ನಿಧಿ ಘಟಕ ಸ್ಥಾಪನೆಗೆ ಕೈಗೊಳ್ಳಬೇಕಾದ ಗಂಭೀರವಾದ ವ್ಯವಸ್ಥೆಗಳ ಬಗ್ಗೆ, ಲೋಪಮುದ್ರಾ ಆಸ್ಪತ್ರೆಯ ಮುಖ್ಯಸ್ಥ ಡಾ. ಅಮೃತ್ ನಾಣಯ್ಯ, ಅಭಿಪ್ರಾಯ ಹಂಚಿಕೊAಡರು. ಕಾಪ್ಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಅಣ್ಣಳಮಾಡ ಮಾನಸ ತಿಮ್ಮಯ್ಯ ಮಾತನಾಡಿ, ರಕ್ತದಾನದಿಂದ ಮೂರು ಜೀವಗಳನ್ನು ಉಳಿಸುವ ಪುಣ್ಯ ಸಿಗುತ್ತದೆ. ಪ್ರತಿಯೊಬ್ಬರೂ ಯಾವುದೇ ಭಯವಿಲ್ಲದೆ ರಕ್ತದಾನ ಮಾಡುವುದರಿಂದ ಆರೋಗ್ಯ ಪೂರ್ಣ ದೇಹವನ್ನು ಹೊಂದಲು ಸಾಧ್ಯವಾಗುತ್ತದೆ.

ಸಂಘ ಸಂಸ್ಥೆಗಳು ಕೊರತೆಯಾಗುವ ರಕ್ತವನ್ನು ಸರಿದೂಗಿಸಲು ಶಿಬಿರಗಳನ್ನು ಏರ್ಪಡಿಸುವ ಮೂಲಕ ರಕ್ತದಾನಕ್ಕೆ ಮಹತ್ವವನ್ನು ನೀಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ, ಕಂದಾ ದೇವಯ್ಯ ಮಾತನಾಡಿ, ಯುವ ಒಕ್ಕೂಟಗಳು ಹೆಚ್ಚು ಸಾಮಾಜಿಕ ಕಾರ್ಯಗಳತ್ತ ತೊಡಗಿಸಿಕೊಳ್ಳುವಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ, ರಕ್ತದಾನ ಶಿಬಿರಗಳನ್ನು ಆಯೋಜಿಸಿದಾಗ ಸಾಕಷ್ಟು ರೋಗಿಗಳಿಗೆ, ಅಪಘಾತಕ್ಕೊಳಗಾದವರಿಗೆ ಸಹಾಯವಾಗುತ್ತದೆ. ರಕ್ತದಾನದ ಮಹತ್ವವನ್ನ ಗಂಭೀರವಾಗಿ ಪರಿಗಣಿಸಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.

ಶಿವಾಜಿ ಯುವಸೇನೆಯ ಅಧ್ಯಕ್ಷ ಅಣ್ಣಪ್ಪ, ಗೌರವ ಅಧ್ಯಕ್ಷ ಕೊಲ್ಲಿರ ಗಯಾ ಕಾವೇರಪ್ಪ, ಜಿಲ್ಲಾ ರಕ್ತ ನಿಧಿ ಘಟಕದ ವೈದ್ಯ ಡಾ. ಗಾಯತ್ರಿ, ಉಮಾಮಹೇಶ್ವರಿ ದೇವಸ್ಥಾನದ ಕೋಶಾಧಿಕಾರಿ, ಜಪ್ಪೆಕೊಡಿ ಉತ್ತಪ್ಪ ಮತ್ತು ಶಿವಾಜಿ ಯುವ ಸೇನೆಯ ಪದಾಧಿಕಾರಿಗಳಾದ, ಶಿಜು, ಸ್ವಾಮಿ, ಸುರೇಶ್, ವಿನೋದ್, ಅಕ್ಷಯ್, ಕಿರಣ್, ರಾಜೇಶ್ ರೈ, ದೀಪು, ಅಖಿಲ್ ಇದ್ದರು.