ಮುಳ್ಳೂರು, ಆ. ೩೧: ಸಮೀಪದ ಆಲೂರುಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಾಲೆಗೆ ೭೫ ವರ್ಷ ತುಂಬಿದ ಹಿನ್ನಲೆಯಲ್ಲಿ ಶಾಲಾ ಅಮೃತ ಮಹೋತ್ಸವ ಸಮಿತಿ ವತಿಯಿಂದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಶಾಲಾ ಸಭಾಂಗಣದಲ್ಲಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್. ಸತೀಶ್‌ಕುಮಾರ್ ಅಧ್ಯಕ್ಷತೆಯಲ್ಲಿ ೬ನೇ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆರ್ಥಿಕ ಸಂಗ್ರಹ ಮತ್ತು ಇತರೆ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಈ ಶಾಲೆಯಲ್ಲಿ ಓದಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿರುವ ನಿವೃತ್ತ ಸೈನಿಕರು, ನಿವೃತ್ತ ಶಿಕ್ಷಕ, ಶಿಕ್ಷಕಿಯರು ಮತ್ತು ವಿವಿಧ ಸರಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕಕರ ಪಟ್ಟಿಯನ್ನು ತಯಾರಿಸಲಾಯಿತು. ಸೆ.೯ ರಂದು ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮದ ದಿನಾಂಕವನ್ನು ನಿಗದಿಪಡಿಸಲು ತೀರ್ಮಾನಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ ಎಚ್.ಪಿ. ಕರುಂಬಯ್ಯ, ಹಿರಿಯರಾದ ಕಡ್ಯದ ಮಾಚಯ್ಯ, ಅಂಬ್ರಾಟಿ ಮಾದಪ್ಪ, ಎಚ್.ಎಸ್. ಪ್ರೇಮ್‌ನಾಥ್, ಶಾಲಾ ಮುಖ್ಯ ಶಿಕ್ಷಕ ಉದಯ್‌ಕುಮಾರ್, ಹಿರಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.