ಸೋಮವಾರಪೇಟೆ, ಆ. ೩೦: ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಸೋಮವಾರಪೇಟೆ ಪಟ್ಟಣದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಜಾಥಾಗೆ ಚಾಲನೆ ದೊರೆತು, ಶನಿವಾರಸಂತೆ, ಕೊಡ್ಲಿಪೇಟೆ, ಶುಕ್ರವಾರಸಂತೆ, ದೋಣಿಗಾಲ್, ಗುಂಡ್ಯ ರಾಷ್ಟ್ರಿಯ ಹೆದ್ದಾರಿ ಮಾರ್ಗವಾಗಿ ಧರ್ಮಸ್ಥಳ ತಲುಪಿತು.

ಸುಮಾರು ೧೫೦ಕ್ಕೂ ಅಧಿಕ ವಾಹನಗಳಲ್ಲಿ ೫೦೦ಕ್ಕೂ ಹೆಚ್ಚಿನ ಭಕ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಬಳಿಕ ಧರ್ಮಸ್ಥಳದ ದೇವಾಲಯ ಆವರಣಕ್ಕೆ ಮೆರವಣಿಗೆ ಮೂಲಕ ತೆರಳಿ ದೇವರ ದರ್ಶನ ಪಡೆದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರನ್ನು ಭೇಟಿಯಾದರು.

ಈ ಸಂದರ್ಭ ಮಾತನಾಡಿದ ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯ ಸೋಮವಾರಪೇಟೆ ತಾಲೂಕು ಸಂಚಾಲಕ ಸುಭಾಷ್, ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಯತ್ನವನ್ನು ಖಂಡಿಸಿ, ಪುಣ್ಯ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಪಿತೂರಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಗೃತಿ ಜಾಥಾವನ್ನು ನಡೆಸಲಾಗಿದೆ. ಎಸ್.ಐ.ಟಿ. ತನಿಖೆಯೂ ಪ್ರಾಮಾಣಿಕವಾಗಿ ನಡೆಯಬೇಕು ಹಾಗೂ ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ನಿವಾರಿಸಬೇಕೆಂಬ ಉದ್ದೇಶದಿಂದ ೫೦೦ಕ್ಕೂ ಅಧಿಕ ಮಂದಿ ಭಾಗವಹಿಸಿದ್ದೇವೆ ಎಂದರು.

ಸಮಿತಿ ಹಿರಿಯ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ,. ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಪಿತೂರಿಯ ಬಗ್ಗೆ ರಾಷ್ಟಿçÃಯ ತನಿಖಾ ಸಂಸ್ಥೆಯಿAದ ತನಿಖೆ ಆಗಬೇಕು. ಅದರ ಮೂಲಕ ತಲೆಬುರುಡೆ ವಿಚಾರದಲ್ಲಿ ಮೂವರ ಜೊತೆಗೆ ಇನ್ನೂ ಯಾರ ಕೈವಾಡವಿದೆ ಎಂಬುದು ಬಹಿರಂಗವಾಗಬೇಕು. ಅವರ ಮೇಲೂ ಕಾನೂನು ಕ್ರಮ ಆಗಬೇಕು ಎಂದು ಅಭಿಪ್ರಾಯಿಸಿದರು.

ಈ ಸಂದರ್ಭ ತಾಲೂಕು ಸಹ ಸಂಚಾಲಕ ಶಶಿಕಾಂತ್ ಬಜೆಗುಂಡಿ, ಸಮಿತಿಯ ಸದಸ್ಯರಾದ ಸುನಿಲ್ ಮಾದಾಪುರ, ಬೋಜೇಗೌಡ, ಎಂ.ಬಿ.ಉಮೇಶ್ ಸೇರಿದಂತೆ ಇತರರು ಇದ್ದರು.