ಮಡಿಕೇರಿ, ಆ.೨೭ : ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ ೧೮ನೇ ಪುಣ್ಯಸ್ಮರಣೆಯ ಅಂಗವಾಗಿ ಮಡಿಕೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಮಡಿಕೇರಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಸಮಾಜ ಸೇವಾ ವಿಭಾಗ ಹಾಗೂ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಗರದ ಬ್ರಹ್ಮಾಕುಮಾರಿ ಲೈಟ್‌ಹೌಸ್ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಪಾಲ್ಗೊಂಡು ರಕ್ತದಾನ ಮಾಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಶಿಬಿರ ಉದ್ಘಾಟಿಸಿದರು. ಬ್ರಹ್ಮಾಕುಮಾರಿ ಲೈಟ್ ಹೌಸ್ ನ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯಿತ್ರಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ರಕ್ತದಾನದ ಮಹತ್ವದ ಕುರಿತು ವಿವರಿಸಿದರು.

ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಪೊಲೀಸ್ ಅಧಿಕಾರಿ ರಾಮಪ್ಪ ಹಾಗೂ ಸಮಾಜ ಸೇವಕ ಕಲೀಲ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.