ಸೋಮವಾರಪೇಟೆ, ಆ. ೨೮: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಸರೆ ಫೌಂಡೇಷನ್ ಸಹಯೋಗದೊಂದಿಗೆ ತಾ. ೩೦ರಂದು ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ.ಎ. ಲಾರೆನ್ಸ್ ತಿಳಿಸಿದ್ದಾರೆ.
ತಾ. ೩೦ರಂದು ಬೆಳಿಗ್ಗೆ ೧೦ ಗಂಟೆಗೆ ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಪ್ರಾಂಶುಪಾಲ ಬಿ.ಎಂ. ಬೆಳ್ಳಿಯಪ್ಪ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಿದಾನಂದಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ಉದ್ಯಮಿ ಗಿರೀಶ್ ಮಲ್ಲಪ್ಪ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿಗೆ ಸಹಕರಿಸುತ್ತಿರುವ ಬಿಎಸ್‌ಸಿ ವೆಂರ‍್ಸ್ನ ಸಿ.ಈ. ಚೇತನ್, ಉದ್ಯಮಿ ವಿಜಯಕುಮಾರ್, ನಿವೃತ್ತ ಉಪನ್ಯಾಸಕಿ ಎಂ.ಬಿ. ತಿಲೋತ್ತಮೆ ಅವರುಗಳನ್ನು ಸನ್ಮಾನಿಸಲಾಗುವುದು.
ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಸರೆ ಫೌಂಡೇಷನ್ ಸಹಕಾರದೊಂದಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ವಿ.ಎ. ಲಾರೆನ್ಸ್ ತಿಳಿಸಿದ್ದಾರೆ.