ಮಡಿಕೇರಿ, ಆ. ೩೦: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೆಲವರು ಷಡ್ಯಂತ್ರ ರೂಪಿಸಿ ಸನ್ನಿಧಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಬಿಜೆಪಿಯಿಂದ ಹಮ್ಮಿಕೊಂಡಿರುವ ಧರ್ಮಸ್ಥಳ ಚಲೋ ಹೋರಾಟಕ್ಕೆ ಜಿಲ್ಲಾ ಬಿಜೆಪಿಯಿಂದಲೂ ಬೆಂಬಲ ಸೂಚಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದೂಗಳ ಪವಿತ್ರ ಕ್ಷೇತ್ರವಾದ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಕೆಲವರು ಕಪೋಲ ಕಲ್ಪಿತ ಕಥೆ ಸೃಷ್ಟಿಸಿ ಚ್ಯುತಿ ತರುವ ಕೆಲಸ ಮಾಡುತ್ತಿರುವುದು ಖಂಡಿಸಿ ಸೆ. ೧ ರಂದು ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಮಡಿಕೇರಿ ನಗರ, ಗ್ರಾಮಾಂತರ ಮಂಡಲ ವೀರಾಜಪೇಟೆ ಮತ್ತು ಸೋಮವಾರಪೇಟೆ ಮಂಡಲಗಳಲ್ಲಿ ಈಗಾಗಲೇ ಪೂರ್ವ ತಯಾರಿ ಸಭೆಗಳನ್ನು ನಡೆಸಲಾಗಿದೆ. ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಧರ್ಮಸ್ಥಳ ಕ್ಷೇತ್ರದ ಭಕ್ತರು ಕೂಡ ಜೊತೆಯಾಗಲಿದ್ದಾರೆ. ಸೆ. ೧ ರ ಬೆಳಿಗ್ಗೆ ೮ ಗಂಟೆಗೆ ಕೊಯಿನಾಡಿನ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಸೇರಿ ಧರ್ಮಸ್ಥಳಕ್ಕೆ ತೆರಳಲಾಗುವುದು. ಮಧ್ಯಾಹ್ನ ೨ ಗಂಟೆಗೆ ಧರ್ಮಸ್ಥಳದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ. ರಾಜ್ಯದ ವಿವಿಧೆಡೆಗಳಿಂದ ಅಂದಾಜು ೧ ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಕೊಡಗಿನಿಂದ ಸುಮಾರು ೪೦೦ ರಿಂದ ೫೦೦ ವಾಹನಗಳಲ್ಲಿ ಸುಮಾರು ೨೦೦೦ಕ್ಕೂ ಮೇಲ್ಪಟ್ಟು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ