ಮಡಿಕೇರಿ, ಆ. ೨೯: ಕೊಡಗು ಜಿಲ್ಲೆಯ ಗಡಿಭಾಗಕ್ಕೆ ಒತ್ತಿಕೊಂಡಿರುವ ಕೇರಳ ರಾಜ್ಯದ ವಯನಾಡು ಜಿಲ್ಲೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಕಳೆದೆರಡು ದಿನಗಳ ಹಿಂದೆ ಈ ಅನಾಹುತ ಸಂಭವಿಸಿದ್ದು, ಪ್ರಸ್ತುತ ಈ ರಸ್ತೆಯ ಮೂಲಕ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಕುಟ್ಟ - ವಯನಾಡು ರಸ್ತೆಯ ಬದಲಾಗಿ ಗೋಣಿಕೊಪ್ಪ, ಕೂಟುಪೊಳೆ, ಇರಿಟ್ಟಿ (ಕಣ್ಣೂರು ಜಿಲ್ಲೆ) ಮಾರ್ಗವನ್ನು ಬಳಸಲು ಸೂಚನೆ ನೀಡಲಾಗಿದೆ.
ವಯನಾಡು ಜಿಲ್ಲೆಯ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಅವರು ಈ ಬಗ್ಗೆ ನೆರೆ ಜಿಲ್ಲೆಯಾಗಿರುವ ಕೊಡಗು ಜಿಲ್ಲಾಧಿಕಾರಿಗಳಿಗೆ ನಿನ್ನೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಮನವಿಯಂತೆ ಕೊಡಗು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಮೂಲಕ ಈ ಬಗ್ಗೆ ಸೂಚನೆ ನೀಡಿದ್ದಾರೆ.
ವಯನಾಡು ಜಿಲ್ಲೆಗೆ ಸಂಪರ್ಕಿಸುವ ರಸ್ತೆಯ ತಮರಶೇರಿ ಘಾಟ್ ಬಳಿ ಭೂಕುಸಿತ ಉಂಟಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಈ ರಸ್ತೆ ಸಮರ್ಪಕಗೊಳ್ಳುವತನಕ ಈ ಮಾರ್ಗದಲ್ಲಿ ವಾಹನ ಸಂಚಾರ ಅಸಾಧ್ಯವಾಗಿದೆ. ಕೊಡಗಿನ ಗಡಿಭಾಗವಾದ ಕುಟ್ಟ ಮೂಲಕ ವಯನಾಡು ಜಿಲ್ಲೆಗೆ ಗುಡಲೂರು ಮಾರ್ಗವಾಗಿ ಸಂಚರಿಸುವ ವಾಹನಗಳು ಇದೀಗ ಬದಲೀ ಮಾರ್ಗವಾದ ಗೋಣಿಕೊಪ್ಪ - ಕೂಟುಪೊಳೆ, ಇರಿಟ್ಟಿ ಮಾರ್ಗದ ಮೂಲಕ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ವಯವಾಡು ಜಿಲ್ಲಾಧಿಕಾರಿಗಳ ಕೋರಿಕೆಯಂತೆ ಕೊಡಗು ಜಿಲ್ಲಾಧಿಕಾರಿಗಳು ಈ ಬಗ್ಗೆ ಪ್ರಕಟಣೆ ಮೂಲಕ ಸಲಹೆ ನೀಡಿದ್ದಾರೆ.
ವಯನಾಡು - ಕ್ಯಾಲಿಕೆಟ್ - ತಮರಶೇರಿ ಲಡಿಕ್ಕಿ ಮಾರ್ಗದಲ್ಲಿ ಸಮಸ್ಯೆ ಎದುರಾಗಿರುವುದಾಗಿ ಮಾನಂದ ವಾಡಿ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ. ವಯ ನಾಡಿಗೆ ಹೋಗುವ ತಮರಶೇರಿ ಘಾಟ್‌ನಲ್ಲಿ ಸಂಚಾರ ನಿಷೇಧ ಮುಂದುವರಿಯಲಿದೆ ೪ಏಳ ಎಂದು ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಪ್ರಕಟಿಸಿದ್ದಾರೆ. ಮಂಗಳವಾರ ರಾತ್ರಿ ಚುರಾತ್ ವೀಕ್ಷಣಾ ಕೇಂದ್ರದ ಬಳಿ ಬೃಹತ್ ಬಂಡೆ, ಮಣ್ಣು ಮತ್ತು ಮರಗಳು ಕುಸಿದ ನಂತರ ಸ್ಥಗಿತಗೊಂಡಿದ್ದ ಸಂಚಾರವನ್ನು ಭಾಗಶಃ ಸರಿಪಡಿಸಲಾಗಿದೆ. ಆದರೆ ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂಬ ತಜ್ಞರ ತಂಡದ ವರದಿಯ ನಂತರ ನಿಷೇಧವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.ಭೂವಿಜ್ಞಾನ ಮತ್ತು ಮಣ್ಣು ಸಂರಕ್ಷಣಾ ಇಲಾಖೆಗಳು ಭೂಕುಸಿತ ಪ್ರದೇಶದಲ್ಲಿ ಜಂಟಿ ಪರಿಶೀಲನೆ ನಡೆಸಿವೆ. ಪ್ರದೇಶದಲ್ಲಿ ಸವೆದುಹೋದ ಬಂಡೆಗಳು ಅಪಾಯಕಾರಿ ರೀತಿಯಲ್ಲಿ ಕುಸಿದಿದ್ದು, ಸುಮಾರು ೩೦ ಮೀಟರ್ ಎತ್ತರದಿಂದ ಬಂಡೆಗಳು, ಮಣ್ಣು ಮತ್ತು ಮರಗಳು ಬಿದ್ದಿವೆ.
ಕೇರಳ ರಾಜ್ಯಕ್ಕೆ ಕುಟ್ಟ - ವಯನಾಡು ಮೂಲಕ ಕರ್ನಾಟಕ ಹಾಗೂ ಕೊಡಗಿನ ಜನರೂ ಹೆಚ್ಚಾಗಿ ವಿವಿಧ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ವ್ಯಾಪಾರ - ವಹಿವಾಟುಗಳಿಗೂ ಈಗಿನ ಪರಿಸ್ಥಿತಿಯಿಂದ ಸಮಸ್ಯೆ ಎದುರಾಗಿದೆ. ಇದೀಗ ಭೂಕುಸಿತದಿಂದ ಅಪಾಯಕಾರಿಯಾಗಿರುವ ರಸ್ತೆಯನ್ನು ಸರಿಪಡಿಸುವ ಕೆಲಸ ಮುಕ್ತಾಯಕ್ಕೆ ಮಳೆಯ ವಾತಾವರಣ ಅಡ್ಡಿಯಾಗಿದೆ. ಇದರಿಂದ ರಸ್ತೆಯ ಸಮರ್ಪಕತೆಗೆ ಕೆಲ ಸಮಯದ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೇರಳ ಪ್ರವೇಶಕ್ಕೆ ಬದಲೀ ಮಾರ್ಗವನ್ನು ಬಳಸಲು ಸಲಹೆ ನೀಡಲಾಗಿದೆ. ನಿನ್ನೆ ತನಕ ಮಾನಂದವಾಡಿ ತನಕ ಲಘು ವಾಹನಗಳನ್ನು ಬಿಡಲಾಗುತ್ತಿತ್ತು. ಇದೀಗ ಜಿಲ್ಲಾಧಿಕಾರಿಗಳ ಸೂಚನೆ ಬಳಿಕ ಎಲ್ಲಾ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕುಟ್ಟದಿಂದ ತೋಲ್ಪಟ್ಟಿ ತನಕ ಸ್ಥಳೀಯವಾಗಿ ಮಾತ್ರ ವಾಹನ ಸಂಚಾರವಿರುವುದಾಗಿ ಕುಟ್ಟ ಪೊಲೀಸರು ತಿಳಿಸಿದ್ದಾರೆ.