ಧರ್ಮಸ್ಥಳ ಆ. ೨೯: ಧರ್ಮಸ್ಥಳದ ನೆಲದಲ್ಲಿ ಅಹಿತಕರ ಘಟನೆಗಳು ನಡೆದಿದೆ ಎಂದು ಕೆಲವರು ಆರೋಪ ಹೊರಿಸಿರುವ ಪ್ರಕರಣದ ಕುರಿತು ಎಸ್.ಐ.ಟಿ ತನಿಖೆ ನಡೆಯುತ್ತಿದೆ. ಆದ್ದರಿಂದ ಹೆಚ್ಚು ಮಾತನಾಡಬಾರದು ಎಂಬ ಸೂಚನೆ ಇದೆ. ಆದರೂ ನಾನು ಎಲ್ಲರನ್ನೂ ಸಂಯಮದಿAದ ಇರಲು ವಿನಂತಿಸುತ್ತೇನೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಜೈನ ನಾಯಕರು ಧರ್ಮಸ್ಥಳಕ್ಕೆ ಇಂದು ಆಗಮಿಸಿ ಹೆಗ್ಗಡೆ ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ ಸಂದರ್ಭ ಅವರು ನೆರೆದವರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈಗಿನ ಸನ್ನಿವೇಶದಿಂದ ಭಕ್ತರಲ್ಲಿ ಅಶಾಂತಿ ಮನೆ ಮಾಡಿದೆ. ಮಹಿಳೆಯರು ಕಣ್ಣೀರಿಟ್ಟು ನೋವು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಆದರೆ, ಸತ್ಯವನ್ನು ಬಿಟ್ಟು ನಾನು ಎಂದಿಗೂ ಹೋಗಿಲ್ಲ, ಹೋಗುವುದೂ ಇಲ್ಲ. ಶಾಂತತೆ ಹಾಗೂ ತಾಳ್ಮೆಯನ್ನು ಎಲ್ಲರೂ ಕಾಪಾಡಬೇಕು. ಸಂಯಮವೇ ಅತ್ಯಂತ ಶ್ರೇಷ್ಠ ಎಂದು ಹೇಳಿದರು. ಅವರು ಇನ್ನಷ್ಟು ವಿವರಿಸುತ್ತಾ, ವಿವೇಕಾನಂದರು ದಶ ಲಕ್ಷಣಗಳ ಎಲ್ಲಾ ಗುಣಗಳನ್ನು ಪಾಲಿಸಿದರು, ಆದರೆ ಅವರು ಜೈನ ಧರ್ಮದ ಬಗ್ಗೆ ಹೇಳಿಲ್ಲ. ಸತ್ಯ ಒಂದೇ. ಎಲ್ಲರೂ ದಶ ಧರ್ಮಗಳನ್ನು ಪಾಲಿಸಲೇಬೇಕು ಎಂದು ಕರೆ ನೀಡಿದರು.