ಸೋಮವಾರಪೇಟೆ, ಆ. ೨೯: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸುವ ಬಗ್ಗೆ ದಾಖಲೆಗಳಿದ್ದ ಕಡತ ನಾಪತ್ತೆಯಾಗಿರುವುದರ ಹಿಂದೆ ಕೆಲವು ಸದಸ್ಯರು ಶಾಮೀಲಾಗಿದ್ದಾರೆ ಎಂದು ಇಂದಿರಾಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯ್ತಿ ನಾಮನಿರ್ದೇಶಿತ ಸದಸ್ಯ ಹೆಚ್. ಎ.ನಾಗರಾಜ್ ಆರೋಪಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ನಿವೇಶನ ಕೊಡುವ ವಿಚಾರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಆದರೆ ಇತ್ತೀಚೆಗೆ ಅನುಮೋದನೆಗೊಂಡ ಕಡತವೇ ಕಚೇರಿಯಿಂದ ನಾಪತ್ತೆ ಆಗಿದೆ. ಆದರೆ ಈ ಬಗ್ಗೆ ಈವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಕೆಲವು ಸದಸ್ಯರೂ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಡತ ನಾಪತ್ತೆ ಪ್ರಕರಣಕ್ಕೆ ಸಂಬAಧಿಸಿದ ಆರೋಪಿಯ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು. ಕಡತವನ್ನು ತೆಗೆದುಕೊಂಡು ಹೋಗುವುದು ಸಿ.ಸಿ. ಕ್ಯಾಮೆರಾದಲ್ಲಿ ಪತ್ತೆಯಾಗಿದ್ದರೂ ಈವರೆಗೆ ಕಡತವನ್ನು ವಾಪಸ್ ಪಡೆದುಕೊಂಡಿಲ್ಲ. ಈ ಮಧ್ಯೆ ಕಡತವನ್ನು ಹೊತ್ತೊಯ್ದ ಸಿಬ್ಬಂದಿಯನ್ನೇ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆ ಕೆಲವರು ತೆರೆಮರೆಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.
ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರಿಗೆ ಸರಿಯಾದ ಸೌಲಭ್ಯ ದೊರಕುತ್ತಿಲ್ಲ ಎಂದ ಅವರು, ೧೭ ಲಕ್ಷ ಅನುದಾನವಿದ್ದರೂ ಕೇವಲ ಒಬ್ಬ ಫಲಾನುಭವಿಯನ್ನು ಮಾತ್ರ ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಪಂಚಾಯ್ತಿಯಲ್ಲಿರುವ ಸಿಬ್ಬಂದಿಗಳ ವರ್ತನೆ ಬದಲಾಯಿಸಲು ಸಾಧ್ಯವೇ ಇಲ್ಲಾ ಎನ್ನುವಂತಾಗಿದೆ. ಎಲ್ಲಿ ನಮ್ಮ ಕಡತವೂ ಕಾಣೆಯಾಗಿಬಿಡುತ್ತದೆ ಎಂಬ ಭಯದಿಂದ ಸಾರ್ವಜನಿಕರು ಕಚೇರಿಗೆ ಅರ್ಜಿ ಅಥವಾ ದಾಖಲಾತಿಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿವರಿಸಿದರು.
ಪಟ್ಟಣದಲ್ಲಿ ರಸ್ತೆಗಳೆಲ್ಲಾ ಗುಂಡಿ ಬಿದ್ದುಹೋಗಿದೆ. ಇದನ್ನು ಮುಚ್ಚುವ ಕೆಲಸವನ್ನೂ ಪಂಚಾಯಿತಿ ಮಾಡಿಲ್ಲ. ಖಾಸಗಿ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ಸಮೀಪವಿರುವ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಇದನ್ನು ಸರಿಪಡಿಸುವ ಬದಲು ಆಗಾಗ್ಗೆ ಬಣ್ಣ ಬಳಿದು ಬಿಲ್ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹೈಟೆಕ್ ಮಾರುಕಟ್ಟೆಯ ಬಳಿ ಅವಶ್ಯವಿಲ್ಲದಿದ್ದರೂ ನಿರ್ಮಿಸಿರುವ ಕಾಂಕ್ರಿಟ್ ರಸ್ತೆ ಕಳಪೆಯಿಂದ ಕೂಡಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಆರಂಭದಲ್ಲಿ ಉತ್ತಮ ಆಹಾರ ನೀಡುತ್ತಿದ್ದರು; ಈಗ ಸರಿಯಾಗಿ ನೀಡುತ್ತಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯ್ತಿ ಗಮನ ಹರಿಸುತ್ತಿಲ್ಲವೆಂದ ಅವರು, ಕೆಲವೆಡೆ ರಸ್ತೆ ಬದಿಯಲ್ಲಿ ಕಸ ಸುರಿಯುತಿದ್ದಾರೆ, ನಾಯಿ, ದನಗಳ ಹಾವಳಿ ಮಿತಿಮೀರಿದೆ. ಒಟ್ಟಾರೆ ಪಟ್ಟಣ ಪಂಚಾಯಿತಿ ಆಡಳಿತ ನಿಷ್ಪçಯೋಜಕ ಎಂಬAತಾಗಿದೆ ಎಂದರು.
ಪಟ್ಟಣದ ಸಮಸ್ಯೆಗಳ ಬಗ್ಗೆ ಶಾಸಕರು ತಕ್ಷಣ ಮಧ್ಯೆ ಪ್ರವೇಶಿಸಬೇಕು. ಪಂಚಾಯಿತಿ ಆಡಳಿತದ ಬಗ್ಗೆ ಗಮನಹರಿಸಬೇಕು ಎಂದು ನಾಗರಾಜ್ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರುಗಳಾದ ಹೆಚ್.ಜಿ. ರಘು, ಸಿ.ಕೆ. ಜಗದೀಶ್, ಎಸ್.ಎನ್. ರಾಜು, ಹೆಚ್.ಜಿ. ರವೀಂದ್ರ ಇದ್ದರು.