ಕೂಡಿಗೆ, ಆ. ೨೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಆನೆಕೆರೆಯು ಭರ್ತಿಯಾದ ಹಿನ್ನೆಲೆಯಲ್ಲಿ ಶ್ರೀ ವಿನಾಯಕ ಯುವಕ ಸಂಘ ವತಿಯಿಂದ ಬಾಗಿನ ಅರ್ಪಣೆ ಕಾರ್ಯಕ್ರಮವು ಶ್ರಧ್ಧಾಭಕ್ತಿಯಿಂದ ನೆರವೇರಿತು.
ಗ್ರಾಮದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ಕಳಸ ಹೊತ್ತ ಮಹಿಳೆಯರ ಸಮ್ಮುಖದಲ್ಲಿ ಗ್ರಾಮಸ್ಥರು ದೇವಾಲಯದಿಂದ ಮಂಗಳವಾದ್ಯದೊAದಿಗೆ ಕೆರೆತನಕ ಮೆರವಣಿಗೆಯಲ್ಲಿ ಸಾಗಿಬಂದರು. ಚಿಕ್ಕತ್ತೂರು ಸರಕಾರಿ ಶಾಲಾ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತಳಿರು ತೋರಣ, ಹೂಗಳಿಂದ ಕೆರೆಯ ಆವರಣವನ್ನು ಸಿಂಗರಿಸಲಾಗಿತ್ತು. ಕೂಡಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಅರ್ಚಕ ನವೀನ್ ಭಟ್ ಅವರು ಪೂಜಾ ವಿಧಿ ಕೈಂಕರ್ಯಗಳನ್ನು ನೆರವೇರಿಸಿದರು. ಕೆರೆಗೆ ಗಂಗಾಪೂಜೆ ನೆರವೇರಿಸಿದ ಬಳಿಕ ಬಾಗಿನ ಅರ್ಪಿಸಲಾಯಿತು.
ಕೆರೆಯ ಜಲಮೂಲ ಬತ್ತದಂತೆ, ಸದಾ ಸಮೃದ್ದಿಯಾಗಿ ಜನಜಾನುವಾರುಗಳಿಗೆ ಅನುಕೂಲವಾಗಲು ಕೋರಿ ಪ್ರತಿ ವರ್ಷ ಕೆರೆಗೆ ಬಾಗಿನ ಅರ್ಪಿಸುವ ಕೆಲಸ ಮುಂದುವರೆಸಿಕೊAಡು ಬರಲಾಗುತ್ತಿದೆ. ಗ್ರಾಮದಲ್ಲಿ ಸಾಮರಸ್ಯ, ಸಹೋದರತ್ವ ನಿರಂತರವಾಗಿ ಮುಂದುವರೆಯಲು ಅನುಗ್ರಹ ಕೋರಲಾಗಿದೆ ಎಂದು ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಸಿ.ಸಿ.ಸ್ವಾಮಿ ತಿಳಿಸಿದರು.
ಕೂಡುಮಂಗಳೂರು ಗ್ರಾಪಂ ಸದಸ್ಯ ಸಿ.ಎನ್. ದಿನೇಶ್ ಮಾತನಾಡಿ, ಅತಿ ಪುರಾತನ, ಹೆಚ್ಚಿನ ವಿಸ್ತೀರ್ಣ ಹೊಂದಿರುವ ಪ್ರಸಿದ್ದ ಕೆರೆ ಇದಾಗಿದೆ. ಕೆರೆಯ ಸುತ್ತಲೂ ತಡೆಗೋಡೆ ನಿರ್ಮಾಣ ಸೇರಿದಂತೆ ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಶಾಸಕರು, ಸಂಸದರು ಯೋಜನೆ ರೂಪಿಸಿ ಅನುದಾನ ಒದಗಿಸುವಂತೆ ಕೋರಿದರು.
ಬಾಗಿನ ಬಳಿಕ ನೆರೆದಿದ್ದವರಿಗೆ ಸಮಿತಿಯಿಂದ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಈ ಸಂದರ್ಭ ಯುವಕ ಸಂಘದ ಗೌರವಾಧ್ಯಕ್ಷ ಯೋಗೇಂದ್ರ, ಉಪಾಧ್ಯಕ್ಷ ಸಿ.ಎನ್.ಕೃಷ್ಣ, ಕಾರ್ಯದರ್ಶಿ ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಅನುಕುಮಾರ್, ಖಜಾಂಚಿ ಬಿಜು ರಫೇಲ್, ಕನ್ನಿಕಾ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ನಾಗೇಶ್, ಅರ್ಚಕ ನಾಗೇಂದ್ರ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯರಾದ ಖತೀಜಾ, ಭಾಗ್ಯರವಿ, ಪಾರ್ವತಮ್ಮ ರಾಮೇಗೌಡ, ಸರೋಜ, ಅಭಿವೃದ್ಧಿ ಅಧಿಕಾರಿ ಸಂತೋಷ್, ಐಸಿಡಿ ಸಂಸ್ಥೆ ವ್ಯವಸ್ಥಾಪಕ ಸೋಮಯ್ಯ, ಹನುಮ ಸೇವಾ ಸಮಿತಿ ಅಧ್ಯಕ್ಷ ರಾಮೇಗೌಡ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.