ಮಡಿಕೇರಿ,ಆ.೩೦; ಮರಗೋಡಿನ ವಿವೇಕಾನಂದ ಯುವಕ ಸಂಘ, ಜಿಲ್ಲಾ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೈಲ್ ಮುಹೂರ್ತ ಅಂಗವಾಗಿ ೫೪ನೇ ವರ್ಷದ ಗ್ರಾಮಾಂತರ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ.

ಸೆ.೩ರಂದು ಮರಗೋಡು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಿಗ್ಗೆ ೯.೩೦ಗಂಟೆಗೆ ಸ್ಪರ್ಧೆ ಆರಂಭವಾಗಲಿದ್ದು, ಕಟ್ಟೆಮಾಡುವಿನ ನಿವೃತ್ತ ಯೋಧ ಹನಿ ಸೋಮಯ್ಯ ಉದ್ಘಾಟನೆ ಮಾಡುವರು. ಯುವಕ ಸಂಘದ ಅಧ್ಯಕ್ಷ ಕಾನಡ್ಕ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಿ.ಪಿ. ಚಿತ್ರ, ಸಹಕಾರ ಸಂಘದ ನಿರ್ದೇಶಕ ಬಳಪದ ಜಯಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಕೆದಂಬಾಡಿ ಚಂದ್ರಕಲಾ ಉಪಸ್ಥಿತರಿರುವರು.

ಸಮಾರೋಪ

ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಆಯುಷ್ ವೈದ್ಯಾಧಿಕಾರಿ ಡಾ. ಶುಭ ರಾಜೇಶ್ ಪೂಳಕಂಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅತಿಥಿಗಳಾಗಿ ನಿವೃತ್ತ ಯೋಧ ಚರ್ಮಂಡ ಮೊಣ್ಣಪ್ಪ, ಹೊಸ್ಕೇರಿ ಗ್ರಾ.ಪಂ. ಉಪಾಧ್ಯಕ್ಷ ಮುಕ್ಕಾಟಿ ಚಿದಂಬರ, ಮರಗೋಡು ಗ್ರಾ.ಪಂ. ಸದಸ್ಯ ಪಿ.ಟಿ. ನಂದಕುಮಾರ್ ಉಪಸ್ಥಿತರಿರುವರು.

ಪುಟಾಣಿ ಮಕ್ಕಳಿಂದ ಹಿಡಿದು ಯುವಕರು, ಯುವತಿಯರು ಹಾಗೂ ವಯಸ್ಕರವರೆಗೆ ವಿವಿಧ ರೀತಿಯ ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.