ಸೋಮವಾರಪೇಟೆ, ಆ. ೨೫ : ಅನ್ನಭಾಗ್ಯ ಯೋಜನೆಯಡಿ ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಬಡ ಕುಟುಂಬಗಳಿಗೆ ಸರಬರಾಜಾಗುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದುದನ್ನು ಪತ್ತೆ ಹಚ್ಚಿದ ಸೋಮವಾರಪೇಟೆ ಆಹಾರ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಬರೋಬ್ಬರಿ ೪೨ ಕ್ವಿಂಟಾಲ್‌ಗೂ ಅಧಿಕ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಆಹಾರ ಇಲಾಖಾಧಿಕಾರಿಗಳು, ಆರೋಪಿ ಕೊಣನೂರಿನ ಮಹಮ್ಮದ್ ಗೌಸ್ ಅವರ ಪುತ್ರ ಇದ್ರೀಸ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ಅವರು ಪೊಲೀಸ್ ದೂರು ನೀಡಿದ್ದಾರೆ.
ಕೊಣನೂರಿನ ಇದ್ರೀಸ್ ಸೋಮವಾರಪೇಟೆ ಭಾಗದಲ್ಲಿ ಪಡಿತರ ಚೀಟಿದಾರರಿಂದ ಅಕ್ಕಿಯನ್ನು ಸಂಗ್ರಹಿಸಿ, ಅನೆಕೆರೆಯ ಸಮೀಪ ಕ್ಯಾಂಟರ್ ವಾಹನಕ್ಕೆ ಲೋಡ್ ಮಾಡಿಕೊಂಡು, ವಾಪಸ್ ಕೊಣನೂರಿಗೆ ತೆರಳಲು ಸಿದ್ಧತೆ ನಡೆಸುತ್ತಿರುವ ಬಗ್ಗೆ ಸಿಕ್ಕ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆಗೆ ಇಳಿದ ಅಹಾರ ನಿರೀಕ್ಷಕಿ ಯಶಸ್ವಿನಿ, ಕಚೇರಿ ಸಿಬ್ಬಂದಿ ವಿನೋದ್, ಗ್ರಾಮ ಆಡಳಿತಾಧಿಕಾರಿ ನಾಗೇಂದ್ರ ಅವರುಗಳು ವಾಹನವನ್ನು ಪರಿಶೀಲಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಕನ್ನಡಾಂಬೆ ವೃತ್ತದ ಬಳಿ ನಿಲ್ಲಿಸಿದ್ದ ಕ್ಯಾಂಟರ್‌ನಲ್ಲಿ ಪರಿಶೀಲಿಸಿದ ಸಂದರ್ಭ ೪೨ ಕ್ವಿಂಟಾಲ್ ಪಡಿತರ ಅಕ್ಕಿ ಸಾಗಾಟಗೊಳ್ಳುತ್ತಿರುವುದು ದೃಢಪಟ್ಟಿದ್ದು, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ಗೋಪಾಲ್ ಹಾಗೂ ಸಿಬ್ಬಂದಿಗಳು ವಾಹನ ಸೇರಿದಂತೆ ಇದ್ರೀಸ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ೪ಏಳನೇ ಪುಟಕ್ಕೆಸರ್ಕಾರವು ಪ್ರತಿ ಕೆ.ಜಿ. ಅಕ್ಕಿಗೆ ೩೪ ರೂಪಾಯಿಯಂತೆ ಖರೀದಿ ಮಾಡುತ್ತಿದ್ದು, ಇದೀಗ ಕಾಳಸಂತೆಯಲ್ಲಿ ಮಾರಾಟಕ್ಕೆ ಬಳಕೆಯಾಗುತ್ತಿದ್ದ ಅಕ್ಕಿಯ ಮೌಲ್ಯ ೧,೪೨,೯೨೦ ಆಗಲಿದೆ. ಈ ಅಕ್ಕಿಯನ್ನು ಪಾಲಿಷ್ ಮಾಡಿ ದುಪ್ಪಟ್ಟು ಬೆಲೆಗೆ ಮತ್ತೆ ಮಾರುಕಟ್ಟೆಗೆ ಕಳುಹಿಸುವ ಜಾಲ ಸಕ್ರಿಯವಾಗಿರುವುದು ಈ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ.
ಬೆಲ್ಲ ಸಾಗಾಟ ಮತ್ತು ಮಾರಾಟದ ನೆಪದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟಗೊಳಿಸಲಾಗುತ್ತಿದೆ. ಕ್ಯಾಂಟರ್ ವಾಹನದಲ್ಲಿ ೨ ಚೀಲ ಬೆಲ್ಲ, ೨ ಚೀಲ ಇತರೆ ಅಕ್ಕಿಯನ್ನು ಹೊರತುಪಡಿಸಿದರೆ, ಉಳಿದೆಲ್ಲವೂ ಸರ್ಕಾರದ ಅನ್ನಭಾಗ್ಯ ಯೋಜ ನೆಯಡಿ ಸ್ಥಳೀಯ ನ್ಯಾಯಬೆಲೆ ಅಂಗಡಿಗಳ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಸರ್ಕಾರ ವಿತರಿಸುವ ಅಕ್ಕಿಯಾಗಿದೆ. ಸರ್ಕಾರ ಉಚಿತವಾಗಿ ನೀಡುವ ಅಕ್ಕಿಯನ್ನು ಕೆಲವರು ಕೆ.ಜಿ.ಗೆ ೧೫ ರೂಪಾಯಿಯಂತೆ ಇಂತಹ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇವರುಗಳು ಇದೇ ಅಕ್ಕಿಯನ್ನು ಮಿಲ್‌ಗಳಿಗೆ ರವಾನಿಸಿ ಪಾಲಿಷ್ ಮಾಡಿದ ನಂತರ ಮತ್ತೆ ಮಾರುಕಟ್ಟೆಗೆ ತಂದು ೬೦ ರಿಂದ ೬೫ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಈ ದಂಧೆ ಅನೇಕ ವರ್ಷಗಳಿಂದ ನಡೆಯುತ್ತಿದ್ದರೂ ಪೂರ್ಣ ಪ್ರಮಾಣದ ಕಡಿವಾಣ ಹಾಕುವಲ್ಲಿ ಇಲಾಖೆಗಳು ವಿಫಲವಾಗಿವೆ.
ನ್ಯಾಯಬೆಲೆ ಅಂಗಡಿಯಿAದ ಪಡಿತರ ಪಡೆದು ಕಾಳಸಂತೆಯಲ್ಲಿ ಮಾರಾಟಕ್ಕೆ ನೀಡುವವರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಕ್ರಮ ವಹಿಸಬೇಕು. ಹಾಗಾದಾಗ ಮಾತ್ರ ಇಂತಹ ದಂಧೆಗಳಿಗೆ ಕಡಿವಾಣ ಹಾಕಬಹುದು ಎಂದು ಸಾರ್ವಜನಿಕರು ಆಹಾರ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ಅವರು ನೀಡಿದ ಲಿಖಿತ ದೂರಿನ ಮೇರೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.