ಸೋಮವಾರಪೇಟೆ, ಆ.೨೪: ನಡುರಾತ್ರಿ ಕಾಡಾನೆಯೊಂದು ಹಾಲು ಸರಬರಾಜು ಮಾಡುವ ವಾಹನದ ಮೇಲೆ ದಾಳಿ ಮಾಡಿದ ಘಟನೆ ಯಡವನಾಡು ಅರಣ್ಯ ಸಮೀಪದ ಸುಳೇಬಾವಿ ತಿರುವಿನಲ್ಲಿ ನಡೆದಿದೆ.

ಕೂಡಿಗೆ ಡೈರಿಯಿಂದ ಪ್ರತಿನಿತ್ಯ ನಂದಿನಿ ಹಾಲು ಸರಬರಾಜು ಮಾಡುವ ವಾಹನ ಸೋಮವಾರಪೇಟೆಗೆ ಆಗಮಿಸುತ್ತಿತ್ತು. ನಿನ್ನೆ ಮಧ್ಯರಾತ್ರಿ ೧೨.೪೫ರ ವೇಳೆಗೆ ಯಡವನಾಡು ಅರಣ್ಯ ಸಮೀಪದ ಸುಳೇಬಾವಿ ತಿರುವಿನಲ್ಲಿ ಕಾಡಾನೆಯೊಂದು ಮುಖ್ಯ ರಸ್ತೆಯಿಂದ ದಾಟಿದೆ.

ಇದೇ ಮಾರ್ಗವಾಗಿ ತೆರಳುತ್ತಿದ್ದ ವ್ಯಾನ್ ಚಾಲಕ ಮತ್ತೊಂದು ಆನೆ ಕಾಡಿನಿಂದ ಮುಖ್ಯ ರಸ್ತೆಗೆ ಬರುತ್ತಿರುವುದನ್ನು ಗಮನಿಸಲಿಲ್ಲ. ಏಕಾಏಕಿ ರಸ್ತೆಗೆ ಬಂದ ಕಾಡಾನೆ ವ್ಯಾನ್ ಮೇಲೆ ದಾಳಿ ಮಾಡಿ, ನಂತರ ಕಾಡಿನೊಳಗೆ ತೆರಳಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.