ಕುಶಾಲನಗರ, ಆ. ೨೪: ಕರ್ತವ್ಯ ಲೋಪ ಆರೋಪ ಎದುರಿ ಸುತ್ತಿರುವ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಖಡಕ್ ಎಚ್ಚರಿಕೆ ಕೊಡುವ ಮೂಲಕ ಇನ್ನು ಮುಂದೆ ಹೀಗೆ ಮಾಡದಂತೆ ಬಿಸಿ ಮುಟ್ಟಿಸಿದ್ದಾರೆ.

ಮಂಗಳವಾರ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ರೋಗಿಗಳಿಗೆ ಔಷಧಿ ಚೀಟಿ ಬರೆದು ಕೊಟ್ಟು ಔಷಧಿ ವಿತರಣಾ ಕೇಂದ್ರಕ್ಕೆ ಕಳುಹಿಸಿದ ವೇಳೆ ಅವಧಿಗೂ ಮೊದಲೇ ಅಲ್ಲಿಯ ಸಿಬ್ಬಂದಿ ಔಷಧಿ ವಿತರಣಾ ಕೇಂದ್ರಿAದ ತೆರಳಿದ್ದರು. ದೂರದ ಹಳ್ಳಿಗಳಿಂದಲೂ ಬಂದಿದ್ದ ರೋಗಿಗಳು ಇದರಿಂದಾಗಿ ತೀವ್ರ ಸಮಸ್ಯೆ ಎದುರಿಸಬೇಕಾಯಿತು. ದಿನದ ೨೪ ಗಂಟೆಯೂ ಔಷಧಿಗಳು ಲಭ್ಯವಾಗಬೇಕು ಎನ್ನುವ ಸೂಚನೆ ಇದ್ದರೂ ಏಕಾಏಕಿ ಔಷಧಿ ವಿತರಣಾ ಕೇಂದ್ರ ಮುಚ್ಚಿ ತೆರಳಿದ ಸಿಬ್ಬಂದಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೋಗಿಗಳು ಮತ್ತು ಅವರ ಸಂಬAಧಿಕರು ಕೂಡಲೇ ವಿಷಯವನ್ನು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮತ್ತು ಶಾಸಕ ಡಾ. ಮಂತರ್ ಗೌಡ ಗಮನಕ್ಕೆ ತಂದರು. ಬೆಂಗಳೂರಿನಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮಕ್ಕಾಗಿ ಡಿಹೆಚ್‌ಒ ಅವರಿಗೆ ಸೂಚನೆ ನೀಡಿದರು. ವಿ.ಪಿ. ಶಶಿಧರ್ ಕೂಡ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ರೋಗಿಗಳು ಮತ್ತು ಅವರ ಸಂಬAಧಿಕರ ದೂರಿನ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಔಷಧಿ ವಿತರಣಾ ಕೇಂದ್ರದ ಸಿಬ್ಬಂದಿ ಕರ್ತವ್ಯ ಲೋಪ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಕರ್ತವ್ಯ ಲೋಪ ಮಾಡಿರುವ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಮತ್ತೆ ಈ ಬಗ್ಗೆ ದೂರು ಬಂದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ದೂರು ನೀಡಿದವರಿಗೆ ಕರೆ ಮಾಡಿದ ಡಿಹೆಚ್‌ಒ ಡಾ. ಕೆ.ಎಂ. ಸತೀಶ್ ಕುಮಾರ್ ಇನ್ನು ಮುಂದೆ ಹೀಗಾಗದಂತೆ ಕ್ರಮವಹಿಸುವ ಭರವಸೆ ನೀಡಿದ್ದಾರೆ.