ಭಾರತದ ಅಧ್ಯಾತ್ಮಿಕ ಇತಿಹಾಸದಲ್ಲಿ ಕೃಷ್ಣನ ಕೊಡುಗೆ ಅಜರಾಮರ. ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದಾದ ಮಹಾಭಾರತದ ಮೂಲ ತಿರುಳೇ ಕೃಷ್ಣನ ಸಂದೇಶಗಳು ಹಾಗಾಗಿ ಕೃಷ್ಣ ಭಾರತದ ಜನ ಜೀವನದ ಅವಿಭಾಜ್ಯ ಹಾಗೂ ಪ್ರಭಾವಶಾಲಿ ವ್ಯಕ್ತಿ!
ಭಾರತವು ಹೇಳಿ ಕೇಳಿ ಹಬ್ಬಗಳ ನಾಡು! ವರ್ಣರಂಜಿತ ಹಬ್ಬಗಳು ಮತ್ತು ಸಾಂಪ್ರದಾಯಿಕ ಆಚರಣೆಗಳು ಇಲ್ಲಿ ಸಾಮಾನ್ಯ. ಇಲ್ಲಿ ಪ್ರತಿ ಹಬ್ಬಗಳನ್ನು ಬಹಳ ಉತ್ಸಾಹ ಮತ್ತು ವಿಜೃಂಭಣೆಯಿAದ ಆಚರಿಸುತ್ತೇವೆ ಅದರಲ್ಲಿ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು, ಈ ಹಬ್ಬವನ್ನು ಭಗವಾನ್ ವಿಷ್ಣುವಿನ ಎಂಟನೇ ಅವತಾರವೆಂದು ಪರಿಗಣಿಸಲಾದ ಹಿಂದೂಗಳ ಪ್ರೀತಿಯ ದೇವರಾದ ಭಗವಾನ್ ಶ್ರೀ ಕೃಷ್ಣನ ಜನ್ಮದಿನವನ್ನು ಸಂಭ್ರಮಿಸುವ ಹಬ್ಬವಾಗಿ ಭಾರತದಾದ್ಯಂತ ಉತ್ಸಾಹ, ಸಡಗರ, ಸಂಭ್ರಮದಿAದ ಆಚರಿಸಲಾಗುವುದು. ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿಯನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಎಂಟನೇ ದಿನದಂದು ರೋಹಿಣಿ ನಕ್ಷತ್ರದಲ್ಲಿ ಆಚರಿಸಲಾಗುವುದು. ಅಂದರೆ ಹಿಂದೂ ಚಾಂದ್ರಮಾನ ಪಂಚಾAಗದ ಪ್ರಕಾರ ಶ್ರಾವಣ ಮಾಸದ ಅಷ್ಟಮಿಯಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಬರುತ್ತದೆ. ಜನ್ಮಾಷ್ಟಮಿಯ ಆಚರಣೆಯು ಹಲವು ವಿಶೇಷ ಹಾಗೂ ಆಕರ್ಷಕ ಆಚರಣೆಗಳಿಂದ ಗುರುತಿಸಲ್ಪಟ್ಟಿದೆ, ಇದು ನಮ್ಮ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಹಬ್ಬವಾಗಿ ಬಹಳ ಮಹತ್ವ ಪಡೆದುಕೊಂಡಿದೆ ಉಪವಾಸ ಪ್ರಾರ್ಥನೆಗಳಿಂದ ಹಿಡಿದು ಸಾರ್ವಜನಿಕ ಪ್ರದರ್ಶನಗಳವರೆಗೆ, ಜನ್ಮಾಷ್ಟಮಿಯ ಪ್ರತಿಯೊಂದು ಅಂಶವು ಭಕ್ತಿ ಮತ್ತು ಸಂತೋಷದಿAದ ತುಂಬಿರುತ್ತದೆ. ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ಅಂದರೆ ಎಂಟನೇ ದಿನ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣ ಜನಿಸಿದನು. ಹಿಂದೂ ಸಂಪ್ರದಾಯದ ಪ್ರಕಾರ, ದಿನವನ್ನು ಸೂರ್ಯೋದಯದಿಂದ ಮುಂದಿನ ಸೂರ್ಯೋದಯದವರೆಗೆ ಲೆಕ್ಕಹಾಕಲಾಗುತ್ತದೆ, ಅಂದರೆ ಮಧ್ಯರಾತ್ರಿಯ ಸಮಯವನ್ನು ಅವಲಂಬಿಸಿದೆ ಹಾಗಾಗಿ ಹಲವೆಡೆ ಸತತ ಎರಡು ದಿನಗಳ ಕಾಲ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ.
ವಿಶೇಷವಾಗಿ ಮಥುರಾ ಮತ್ತು ಕೃಷ್ಣ ಬೆಳೆದ ಸ್ಥಳವಾದ ವೃಂದಾವನದಲ್ಲಿ ಹಾಗೂ ಕೃಷ್ಣನ ದೇವಾಲಯವಿರುವ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಲ್ಲಿ ಎರಡು ದಿನಗಳೂ ವಿಶೇಷವಾಗಿ ಆಚರಿಸಲಾಗುತ್ತದೆ, ಹಿಂದೂ ಪುರಾಣಗಳ ಕಥೆಯ ಪ್ರಕಾರ ಮಥುರಾ ನಗರವನ್ನು ಆಳುತ್ತಿದ್ದ ರಾಜ ಕಂಸನು ಬಹಳ ದುಷ್ಟನಾಗಿರುತ್ತಾನೆ. ಅವನ ಆಳ್ವಿಕೆಯಲ್ಲಿ ಮಥುರಾ ರಾಜ್ಯ ಶೋಚನೀಯ ಸ್ಥಿತಿಯಲ್ಲಿ ಇರುತ್ತದೆ. ಆ ಸಂದರ್ಭದಲ್ಲಿ ಮಥುರಾದಲ್ಲಿ ಶ್ರೀ ಕೃಷ್ಣನ ಜನನವಾಗುತ್ತದೆ. ಕಂಸನ ಸಹೋದರಿಯಾದ ದೇವಕಿಯು ವಸುದೇವ ಎಂಬುವನನ್ನು ವಿವಾಹವಾಗುತ್ತಾಳೆ, ಆ ಸಂದರ್ಭದಲ್ಲಿ ಅಂದರೆ ಅವರ ಮದುವೆಯ ದಿನದಂದು ಕಂಸನಿಗೆ ಮೋಡಗಳಿಂದ ನಿನ್ನ ತಂಗಿಯ ಎಂಟನೇ ಮಗ ನಿನ್ನ ಸಾವಿಗೆ ಕಾರಣವಾಗುತ್ತಾನೆ ಎಂಬ ಅಶರೀರವಾಣಿ ಆಗುತ್ತದೆ. ಆಗ ಕಂಸನು ತಕ್ಷಣವೇ ದೇವಕಿ ಮತ್ತು ವಸುದೇವನನ್ನು ಬಂಧಿಸುತ್ತಾನೆ ಮತ್ತು ಮುಂದೆ ಅವರಿಗೆ ಹುಟ್ಟಿದ ಎಲ್ಲಾ ಮಕ್ಕಳನ್ನು ಅವುಗಳು ಹುಟ್ಟಿದ ತಕ್ಷಣ ಕೊಲ್ಲುತ್ತಿರುತ್ತಾನೆ. ಹೀಗೆಯೇ ನಡೆಯುತ್ತಿರುವಾಗ ದೇವಕಿಯ ಎಂಟನೆಯ ಪುತ್ರ ಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸುತ್ತಾನೆ, ಮಗು ಹುಟ್ಟಿದ ವಿಷಯ ಕಂಸನಿಗೆ ತಿಳಿಯುವಷ್ಟರಲ್ಲಿ ಮಗುವಿನ ತಂದೆಯಾದ ವಸುದೇವ ಆ ಮಗವನ್ನು ರಕ್ಷಿಸಲು ಅವನನ್ನು ವೃಂದಾವನದಲ್ಲಿರುವ ತನ್ನ ಸ್ನೇಹಿತ ನಂದನ ಬಳಿಗೆ ಕರೆದೊಯ್ಯುತ್ತಾನೆ. ಆ ಸಮಯದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುತ್ತದೆ. ಆ ಧಾರಾಕಾರ ಮಳೆಯಲ್ಲಿ ಪ್ರಯಾಸಕರ ಪ್ರಯಾಣವನ್ನು ಮಾಡುತ್ತ ವಸುದೇವನು ಶಿಶು ಕೃಷ್ಣನನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ನಡೆಯುತ್ತಾನೆ. ಆ ಮಳೆಯಿಂದ ಮಗುವನ್ನು ರಕ್ಷಿಸಲು ಸಾಕ್ಷಾತ್ ನಾಗದೇವತೆಯೆ ಹಿಂದಿನಿAದ ತನ್ನ ಹೆಡೆಯನ್ನು ಹರಡಿ ಮಗುವನ್ನು ನೆನೆಯದಂತೆ ರಕ್ಷಿಸಿ ಕ್ಷೇಮವಾಗಿ ದಡ ತಲುಪಿಸಲು ಸಹಾಯ ಮಾಡಿತೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ನಂತರ ವೃಂದಾವನದಲ್ಲಿ ಮುದ್ದಾದ ಪುಟ್ಟ ಕೃಷ್ಣನು ಯಶೋದೆ ಮತ್ತು ನಂದಾರವರ ಪ್ರೀತಿಯ ಆರೈಕೆಯಲ್ಲಿ ಸುರಕ್ಷಿತವಾಗಿ ಬೆಳೆಯುತ್ತಾನೆ. ಇದು ಶ್ರೀ ಕೃಷ್ಣ ಜನನದ ಕಥೆ, ಇದನ್ನು ಉತ್ತರ ಭಾರತದ ಅನೇಕ ಸಮುದಾಯಗಳು ತುಂಬಾ ವಿಶೇಷವಾಗಿ ಆಚರಿಸುತ್ತಾರೆ. ಉತ್ತರ ಭಾರತದ ಅನೇಕ ಸಮುದಾಯಗಳು ರಾಸ ಲೀಲಾ ಅಥವಾ ಕೃಷ್ಣ ಲೀಲಾ ಎಂಬ ನೃತ್ಯ-ನಾಟಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ರಾಸಲೀಲೆಯ ಸಂಪ್ರದಾಯವು ಮಥುರಾ ಪ್ರದೇಶದಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ, ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ ಅಸ್ಸಾಂ ರಾಜಸ್ಥಾನ ಗುಜರಾತ್ ಮತ್ತು ಜಮ್ಮು, ಕಾಶ್ಮೀರ ಮಹಾರಾಷ್ಟç ಭಾಗಗಳಲ್ಲಿ ಹಾಗೂ ಇಸ್ಕಾನ್ ದೇವಾಲಯಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಹಲವಾರು ಹವ್ಯಾಸಿ ಕಲಾವಿದರ ತಂಡಗಳು ನಾಟಕ ಅಭಿನಯಿಸುತ್ತವೆ, ಜನರು ತಮ್ಮ ಮನೆಗಳನ್ನು ಹೂವುಗಳು ಮತ್ತು ಬಣ್ಣದ ಬೆಳಕಿನಿಂದ ಅಲಂಕರಿಸುತ್ತಾರೆ. ಅಲ್ಲದೆ ಭಗವದ್ಗೀತೆ ಪಠಣದ ಜೊತೆ ಕೃಷ್ಣನ ಬಾಲ್ಯದ ಚೇಷ್ಟೆಗಳು ಮತ್ತು ರಾಧಾ-ಕೃಷ್ಣರ ಪ್ರೇಮ ಪ್ರಕರಣಗಳ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಗೋಪಿಯರಂತೆ ಕೃಷ್ಣನ ವೇಷ ಭೂಷಣಗಳನ್ನು ಹಾಕಿ ಅಲಂಕರಿಸಿ ಸಂಭ್ರಮಿಸುತ್ತಾರೆ ಈ ದಿನದಂದು ಜನರು "ಹರೇ ಕೃಷ್ಣ... ಹರೇ ಕೃಷ್ಣ... ಕೃಷ್ಣ... ಕೃಷ್ಣ ಹರೇ ಹರೇ...." ಎಂದು ಜಪಿಸುತ್ತಾ ಜನ್ಮಾಷ್ಟಮಿ ಆಚರಣೆಯನ್ನು ಮಾಡುತ್ತಾರೆ.
‘ದಹಿ ಹಂಡಿ ಅಥವಾ ಮೊಸರು ಕುಡಿಕೆ’
ದಹಿ ಹಂಡಿ ಎಂಬ ಆಚರಣೆಯನ್ನು ಮರುದಿನ ಆಚರಿಸಲಾಗುತ್ತದೆ ದಹಿ ಹಂಡಿ ಆಚರಣೆ ತುಂಬಾ ರೋಮಾಂಚನಕಾರಿಯಾದ ಆಚರಣೆಯಾಗಿ ಬಹಳ ಮಾನ್ಯತೆ ಪಡೆದುಕೊಂಡಿದ್ದು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಇದೊಂದು ಮೋಜು ಮಸ್ತಿಯ ಆಟವಾಗಿದ್ದು ಇದು ಕೃಷ್ಣನ ಬಾಲ್ಯದ ತುಂಟಾಟಗಳನ್ನು ಗೌರವಿಸುತ್ತದೆ. ಈ ಆಚರಣೆಯನ್ನು ಮುಂಬೈನಲ್ಲಿ ಬಹಳ ಅದ್ದೂರಿ ಹಾಗೂ ವಿಜೃಂಭಣೆಯಿAದ ಆಚರಿಸುತ್ತಾರೆ. ಹಿಂದೂ ನಂಬಿಕೆಗಳ ಪ್ರಕಾರ ಕೃಷ್ಣ ತನ್ನ ಬಾಲ್ಯದಲ್ಲಿ, ಇತರರಿಂದ ಮತ್ತು ತನ್ನ ಸ್ವಂತ ಮನೆಯಿಂದ ಮೊಸರು ಮತ್ತು ಬೆಣ್ಣೆಯನ್ನು ಕದಿಯಲು ಹೋಗಿ ಯಾವಾಗಲೂ ತೊಂದರೆಗೆ ಸಿಲುಕುತ್ತಿದ್ದ. ಹಾಗಾಗಿ ಅವನನ್ನು "ಮಖನ್ ಚೋರ್' (ಬೆಣ್ಣೆ ಕಳ್ಳ) ಬೆಣ್ಣೆ ಕೃಷ್ಣ ಎಂದು ಕರೆಯಲಾಗುತ್ತದೆ. ಬಾಲ ಕೃಷ್ಣನು ಬೆಣ್ಣೆ ಮತ್ತು ಮೊಸರನ್ನು ತುಂಬಾ ಇಷ್ಟಪಡುತ್ತಿದ್ದರಿಂದ ಭಕ್ತರು ಕೃಷ್ಣ ಜನ್ಮಾಷ್ಟಮಿಯ ನಂತರ ದಹಿ ಹಂಡಿ ಒಡೆಯುವ ಮೂಲಕ ಕೃಷ್ಣನ ಬಾಲ್ಯದ ದಿನಗಳನ್ನು ನೆನಪಿಸುವ ಉತ್ಸವವಾಗಿ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ದಹಿ ಹಂಡಿ ಆಚರಣೆಗಾಗಿ ಜನರು ಮಣ್ಣಿನ ಪಾತ್ರೆಯಲ್ಲಿ ಕೃಷ್ಣನಿಗೆ ಬಹಳ ಪ್ರಿಯವಾದ ಹಾಲು, ಮೊಸರು, ಬೆಣ್ಣೆ ಮತ್ತು ಇತರ ಅನೇಕ ಹಾಲಿನ ಉತ್ಪನ್ನಗಳನ್ನು ತುಂಬುತ್ತಾರೆ ಮತ್ತು ಎರಡು ತುದಿಗಳಲ್ಲಿ ಹಗ್ಗವನ್ನು ಕಟ್ಟಿ ನಿರ್ದಿಷ್ಟ ಎತ್ತರಕ್ಕೆ ನೇತುಹಾಕುತ್ತಾರೆ. ಹುಡುಗರು ಅಥವಾ ಪುರುಷರು ಒಂದು ತಂಡವನ್ನು ಕಟ್ಟಿಕೊಳ್ಳುತ್ತಾರೆ. ಈ ಗುಂಪು ಈ ಹಂಡಿಯನ್ನು ತಲುಪಿ ಅದನ್ನು ಒಡೆಯಲು ಪಿರಮಿಡ್ ರೀತಿಯಲ್ಲಿ ಒಂದು ಆಕೃತಿಯನ್ನು ರಚಿಸುತ್ತಾರೆ.
ಇನ್ನು ಮಹಿಳೆಯರು ನೀರು ಮತ್ತು ಇತರ ಹಾಲಿನ ದ್ರವ್ಯಗಳನ್ನು ಅವರ ಮೇಲೆ ಎರಚುತ್ತಾ ಹುರಿದುಂಬಿಸುತ್ತಾರೆ ಇದರಿಂದ ಅವರು ಕೆಳಗೆ ಬೀಳುತ್ತಾರೆ. ಹಾಗೂ ಮತ್ತೆ ಎದ್ದು ಅದೇ ಆಕೃತಿ ರಚಿಸಿ ದಹಿ ಹಂಡಿಯನ್ನು ಒಡೆಯಲು ಕೋಲು ಬಳಸಿ ಪ್ರಯತ್ನಿಸಿ ಕಡೆಗೆ ಮಡಿಕೆಯನ್ನು ಒಡೆಯುತ್ತಾರೆ, ಆಗ ಅದರಲ್ಲಿದ್ದ ಮೊಸರು ಎಲ್ಲರ ಮೈ ಮೇಲೆ ಬೀಳುತ್ತದೆ. ಈ ಆಟ ನೋಡಲು ಹಾಸ್ಯ ಹಾಗೂ ತುಂಬಾ ರೋಮಾಂಚನಕಾರಿ ಯಾಗಿರುತ್ತದೆ.
- ಗೀತಾಂಜಲಿ ಎನ್.ಎಮ್., ಸೋಮವಾರಪೇಟೆ.