ಶ್ರೀ ಕೃಷ್ಣನು ವಿಷ್ಣುವಿನ ಎಂಟನೆಯ ಅವತಾರ. ಶ್ರೀ ಕೃಷ್ಣನದು ಭಾರತದ ಪುರಾಣ ಪರಂಪರೆಯಲ್ಲಿ ವರ್ಣರಂಜಿತ ವ್ಯಕ್ತಿತ್ವ.
‘ಯುಗಯುಗಗಳಲ್ಲಿ ಧರ್ಮವು ಕ್ಷೀಣಿಸಿದಾಗ, ಅನ್ಯಾಯ ಮಿತಿಮೀರಿದಾಗ ದುಷ್ಟಶಕ್ತಿ, ಶಿಷ್ಟರಕ್ಷೆ ಹಾಗೂ ಧರ್ಮ ಸಂಸ್ಥಾಪನೆಗಾಗಿ ನಾನು ಜನ್ಮತಳೆಯುತ್ತೇನೆ’ ಎಂದು ಸಮಸ್ತ ಜೀವಕೋಟಿಗೆ ಶ್ರೀ ಕೃಷ್ಣನು ಅಭಯಎತ್ತಿದ್ದಾನೆ. ಪರಮಾತ್ಮನಾದ ಶ್ರೀ ಕೃಷ್ಣ ಲೋಕ ಕಂಟಕದ ನಿವಾರಣೆಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಅವತರಿಸಿರುವ ಸೂತ್ರಧಾರಿ ಮಾತ್ರವಲ್ಲ ಮೇಲಿನ ನೀರಿನ ಹನಿಯಂತೆ ನಿರ್ಲಿಪ್ತನಾಗಿರುತ್ತಾನೆ. ಮನುಷ್ಯ ರೂಪದ ಚೇತನದಿಂದ ನಾರಾಯಣತ್ವಕ್ಕೆ ದಾರಿ ತೋರಿಸುತ್ತಾನೆ. ಸೃಷ್ಟಿಲೋಲನಾಗಿ, ವಿಶ್ವ ಚಾಲಕನಾಗಿ, ವಿಶ್ವ ಸಾರಥಿಯಾಗಿ, ಲೀಲಾ ರಥವನ್ನು ತಾನೇ ನಡೆಸುತ್ತಿರುವನು ನಮ್ಮ ಕೃಷ್ಣ.
ಶ್ರೀ ಕೃಷ್ಣ ವಸುದೇವ - ದೇವಕಿಯರ ಮಗ. ಕಂಸನ ಸೆರೆಮನೆಯಲ್ಲಿ ಮಧ್ಯರಾತ್ರಿ ಜನನ. ಬಿರುಸಾದ ಮಳೆಯಲ್ಲಿ ಅಲ್ಲಿಂದ ಗೋಕುಲಕ್ಕೆ ಸ್ಥಳಾಂತರ. ಗೋಕುಲದಲ್ಲಿ ಯಶೋದೆ - ನಂದರ ಮನೆಯಲ್ಲಿ ಕೃಷ್ಣ ಬೆಳೆದ.
ಶ್ರೀ ಕೃಷ್ಣನ ಜನನ, ಬಾಲಲೀಲೆ ಮತ್ತು ಅವನ ಮುಂದಿನ ಚರಿತ್ರೆಗೆ ಸಂಬAಧಿಸಿದ ಅನೇಕ ಅಂಶಗಳು ಸುಂದರ ಕಲ್ಪನೆಗಳಿಂದ ಒಡಗೂಡಿ ವಿಶೇಷ ಬಣ್ಣ ತಳೆದಿವೆ. ಅತಿ ಮಾನವತೆಯ ಅತಿಶಯೋಕ್ತಿಗಳಿಂದ ಕೂಡಿವೆ. ಕೃಷ್ಣನ ಜೀವಿತಕ್ಕೆ ಸಂಬAಧಿಸಿದ ಗ್ರಂಥಗಳಲ್ಲಿ ವಿಷ್ಣು ಪುರಾಣ, ಹರಿ ವಂಶ, ಮಹಾಭಾರತ ಮತ್ತು ಭಾಗವತಗಳು ಪ್ರಮುಖವಾಗಿದೆ.
ಶ್ರೀ ಕೃಷ್ಣ ಮಗುವಾಗಿದ್ದಾಗಲೇ ಅದ್ಭುತ ಲೀಲೆಯನ್ನು ಪ್ರದರ್ಶಿಸಿದ್ದಾನೆ. ಗೋಕುಲದಲ್ಲಿ ಬೆಳೆಯುತ್ತಿದ್ದ ಬಾಲಕೃಷ್ಣ, ಪೂತನಿ, ಚಾಣೂರ, ಮುಷ್ಟಿಕ ಮುಂತಾದ ದುಷ್ಟರನ್ನು ನಾಶಮಾಡುತ್ತಾನೆ. ಇಷ್ಟೇ ಯಾಕೆ ಕಂಸನೂ ಕೃಷ್ಣನಿಂದಲೇ ಹತನಾಗುತ್ತಾನೆ. ಶ್ರೀ ಕೃಷ್ಣನ ಬಾಲಲೀಲೆಗಳು ಭಾಗವತದಲ್ಲಿ ಅದ್ಭುತವಾಗಿ ವರ್ಣಿತವಾಗಿದೆ.
ಶ್ರೀ ಕೃಷ್ಣ ಶಕಟಾಸುರ, ತೃಣಾವರ್ತ, ಮುರ-ನರಕ, ಶಿಶುಪಾಲ, ದಂತವಕ್ರರನ್ನು ಸಂಹರಿಸುವುದರೊAದಿಗೆ ಪಾಂಡವರ ಮೂಲಕ ಜರಾಸಂಧ, ಕೌರವ ಮುಂತಾದ ಅಧರ್ಮ ನಿರತರನ್ನು ಸದೆಬಡೆದು, ಅವರ ಸೆರೆಯಲ್ಲಿದ್ದ ರಾಜರು ಹಾಗೂ ರಾಜಕುಮಾರಿಯರನ್ನೆಲ್ಲಾ ಬಿಡಿಸಿ ರಾಷ್ಟçದಲ್ಲಿ ಸುವ್ಯವಸ್ಥೆಯನ್ನು ಸ್ಥಾಪಿಸಿ, ಸಮುದ್ರ ತಟದ ದ್ವಾರಕೆಯಲ್ಲಿ ನೆಲೆಸಿದ.
ಮಹಾಭಾರತವೆಂಬ ನದಿಯ ನಾವಿಕನಾಗಿ ವಿಶ್ವಕ್ಕೇ ಅಮೂಲ್ಯ ನಿಧಿಯಾದ ಭಗವದ್ಗೀತೆಯನ್ನು ಉಪದೇಶಿಸಿದವನೇ ಶ್ರೀ ಕೃಷ್ಣ. ಈ ಭಗವದ್ಗೀತೆ ಭಾರತದ ಚಿಂತನಾ ಪರಂಪರೆಯ ತಾಯಿ ಬೇರು. ಇದನ್ನು ಬೋಧಿಸಿದ ಕೃಷ್ಣ ಯೋಗೀಶ್ವರ. ಈ ಮಾತು ಅರ್ಥವಾಗಬೇಕಾದರೆ ಕೃಷ್ಣನ ಅವತಾರ ರಾಮಾವತಾರದ ಹಾಗೆಯೇ ಪೂರ್ಣಾವತಾರ, ಶ್ರೀ ಕೃಷ್ಣನ ಲೀಲೆಗಳ ಹಿಂದೆ ಇರುವ ತತ್ವಗಳನ್ನು ಮನಗಾಣಬೇಕು.
ಆಗಲೇ ಭಗವಂತನ ಪ್ರತಿಯೊಂದು ಕೆಲಸದ ಅಂತರಾರ್ಥದ ಅರಿವಾಗುವುದು. ಉದಾ: ಶ್ರೀ ಕೃಷ್ಣನಿಗೆ ಸಾವಿರಾರು ಮಡದಿಯರು ಎಂದರೆ ಸಾವಿರಾರು ಆಕರ್ಷಣೆಗಳು, ಸೆಳೆತಗಳು, ಅಡ್ಡಿ ಆತಂಕಗಳು ಎಂದರ್ಥ. ಬದ್ಧ ಜೀವಿಗಳನ್ನಾಗಿ ಮಾಡುವ ಸೆಳೆತಗಳನ್ನು ಗೆದ್ದಾಗ ಮಾನವ ಸಿದ್ಧ-ಬುದ್ಧನಾಗಬಲ್ಲ.
ಶ್ರೀ ಕೃಷ್ಣನನ್ನು ಗೋಪಾಲ ಎನ್ನುತ್ತಾರೆ. ‘ಗೋಪಾಲ’ ಎಂದರೆ ದನ ಕಾಯುವವನು ಎಂದಲ್ಲ ಅರ್ಥ. (ಗೋ) ಎಂದರೆ ವೇದೋಪನಿಷತ್ತುಗಳು ಮತ್ತು ಇಂದ್ರಿಯಗಳು ಎಂದರ್ಥ. ಅವುಗಳ ರಕ್ಷಕ (ಪಾಲ) ಎಂದರೆ ‘ವೇದ ರಕ್ಷಕ’, ‘ಇಂದ್ರಿಯಗಳ ಪಾಲಕ’ ಎಂದರ್ಥ.
ಶ್ರೀ ಕೃಷ್ಣನ ಬಗ್ಗೆ ಎಲ್ಲರ ಗೌರವ ಹೆಚ್ಚಾಗಿರುವುದು ಅವನ ತ್ಯಾಗ ಮನೋಭಾವದಿಂದ. ಎಷ್ಟೇ ರಾಜರನ್ನು ಗೆದ್ದರೂ, ಗದ್ದುಗೆ ಏರಲಿಲ್ಲ. ಉದಾ: ಕಂಸನನ್ನು ಕೊಂದು ಅವನ ತಂದೆ ಉಗ್ರಸೇನನಿಗೆ ಮಥುರಾ ಪಟ್ಟ ಕಟ್ಟಿದ. ಜರಾಸಂಧನನ್ನು ಕೊಂದು ಅವನ ಮಗ ಸಾಲ್ವನಿಗೆ ಪಟ್ಟ ಕಟ್ಟಿದ.
ಸತ್ಯ, ಧರ್ಮ ಮೀರಿದವರು ಬಂಧುಗಳಾದರೂ ಶಿಕ್ಷಾರ್ಹರು ಎಂಬ ನೀತಿಯನ್ನು ಮಾವ ಕಂಸ, ಬಾವ ಶಿಶುಪಾಲ, ಅಜ್ಜ ಮಾಗಧ ಮುಂತಾದವರನ್ನು ವಧಿಸುವ ಮೂಲಕ ತೋರಿಸಿದ್ದಾನೆ.
ಇಷ್ಟೆಲ್ಲಾ ಆದರೂ ಶ್ರೀ ಕೃಷ್ಣನ ನಯ-ವಿನಯ ಅನುಕರಣೀಯ. ರಾಜಸೂಯ ಯಾಗದಲ್ಲಿ ಆತ ಬ್ರಾಹ್ಮಣರ ಹಾಗೂ ಹಿರಿಯರ ಕಾಲು ತೊಳೆಯುತ್ತಾನೆ. ಇಂತಹ ದೊಡ್ಡ ಗುಣದಿಂದಲೇ ಅವನಿಗೆ ಆ ಯಾಗದ ದೊಡ್ಡ ಸ್ಥಾನವಾದ ‘ಅಗ್ರಪೂಜೆ’ ಲಭಿಸಿತು. ನಂಬಿ ಕರೆದರೆ ‘ಓ’ ಎಂದು ಓಡಿ ಬಂದು ಉದ್ಘರಿಸುವುದು ಅವನ ವೈಶಿಷ್ಟö್ಯ.
ಸುಧಾಮನ ಪ್ರಸಂಗ, ದ್ರೌಪದಿಯ ವಸ್ತಾçಪಹರಣ ಸಂದರ್ಭ ದುರ್ವಾಸಾತಿಥ್ಯ ಸನ್ನಿವೇಶ, ಕುಬ್ಜೆಯ ಗೂನು ತಿದ್ದಿ ಸರಿಪಡಿಸಿದ್ದು, ಧೃತರಾಷ್ಟçನಿಗೆ ದಿವ್ಯದೃಷ್ಟಿ ನೀಡಿದ್ದು ಮುಂತಾದ ಸಂದರ್ಭಗಳು ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ. ಇಂತಹ ಮಹಾಮಹಿಮನ ಜನ್ಮಸ್ಮರಣೆ ನಿಜಕ್ಕೂ ಅರ್ಥಪೂರ್ಣ. ಶ್ರೀ ಕೃಷ್ಣನು ನಮ್ಮ ಜೀವನದ ಕಲುಷಿತ ಕಾಳ ರಾತ್ರಿಯಲ್ಲಿ ಜನಿಸಿ ಎಲ್ಲರನ್ನೂ ಪವಿತ್ರಾತ್ಮರನ್ನಾಗಿ ಮಾಡಲಿ ಎಂದು ಪ್ರಾರ್ಥಿಸುವ ಶುಭದಿನ ಇದು.
- ಹರೀಶ್ ಸರಳಾಯ, ಮಡಿಕೇರಿ, ಮೊ. ೯೭೩೧೮೧೦೨೫೦.