ಮಡಿಕೇರಿ, ಆ. ೧೪: ೨೦೨೩-೨೪ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಮಡಿಕೇರಿ ಇವರಿಗೆ ಅಪೆಕ್ಸ್ ಬ್ಯಾಂಕಿನ ಬಹುಮಾನ ಯೋಜನೆಯನ್ವಯ ಲೆಕ್ಕ ಪರಿಶೋಧನಾ ವರ್ಗೀಕರಣ ‘ಎ’ ವರ್ಗದಲ್ಲಿ ತೃತೀಯ ಸ್ಥಾನ ಪಡೆದ ಪ್ರಯುಕ್ತ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ನೀಡಲಾಯಿತು.

ತಾ. ೧೩ ರಂದು ನಡೆದ ಅಪೆಕ್ಸ್ ಬ್ಯಾಂಕಿನ ೧೦೦ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ. ಗಣಪತಿ, ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಹೊಟ್ಟೇಂಗಡ ರಮೇಶ್ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಹೆಚ್.ಡಿ. ರವಿಕುಮಾರ್ ಪ್ರಶಸ್ತಿ ಸ್ವೀಕರಿಸಿದರು.