ಗೋಣಿಕೊಪ್ಪಲು, ಆ. ೧೧: ಆನೆ-ಮಾನವ ಸಂಘರ್ಷ ತಾರಕ್ಕಕ್ಕೇರುತ್ತಿದ್ದಂತೆಯೇ ಜಿಲ್ಲೆಯ ಹಲವೆಡೆ ಕಾರ್ಮಿಕರ, ರೈತರ ಮೇಲೆ ಕಾಡಾನೆಗಳು ದಾಳಿ ನಡೆಸಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಸಾರ್ವಜನಿಕರು ತೊಂದರೆ ನೀಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರದ ಮೇಲೆ ಒತ್ತಡ ಹೇರಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.

ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣನವರು ನಾಗರಿಕರಿಗೆ ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿರುವ ಹಾಗೂ ಮಾನವನ ಮೇಲೆ ದಾಳಿ ಮಾಡುತ್ತಿರುವ ಪುಂಡಾನೆಯನ್ನು ಸೆರೆ ಹಿಡಿಯಲು ಸರ್ಕಾರದಿಂದ ವಿಶೇಷ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

(ಮೊದಲ ಪುಟದಿಂದ) ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಗ್ರಾಮದಲ್ಲಿರುವ ರೈತರಾದ ಶಿವಪ್ಪ ಎಂಬುವವರು ತಮ್ಮ ಮನೆಯ ಬಳಿ ರಾತ್ರಿ ೮.೩೦ರ ಸುಮಾರಿಗೆ ಜೋರಾಗಿ ಸದ್ದಾಗುತ್ತಿರುವುದನ್ನು ಗಮನಿಸಿ ಮನೆಯ ಹೊರ ಭಾಗಕ್ಕೆ ಆಗಮಿಸಿದ ವೇಳೆ ಮನೆಯ ಬಳಿ ಇದ್ದ ಪುಂಡಾನೆಯೊAದು ಶಿವಪ್ಪನವರ ಮೇಲೆ ದಿಢೀರ್ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಶಿವಪ್ಪನವರು ಮೃತಪಟ್ಟಿದ್ದರು. ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಅಸಮಾಧಾನ ಹೊರಹಾಕಿರುವುದಲ್ಲದೆ ಪ್ರತಿಭಟನೆಗೆ ಗಡುವು ನೀಡಿದ್ದರು.

ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ ತೊಂದರೆ ನೀಡುತ್ತಿರುವ ೨ ಪುಂಡಾನೆಗಳನ್ನು ಸೆರೆ ಹಿಡಿಯಲು ಶಾಸಕ ಪೊನ್ನಣ್ಣ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಅರಣ್ಯ ಮಂತ್ರಿಯವರನ್ನು ಖುದ್ದು ಭೇಟಿ ಮಾಡುವ ಮೂಲಕ ಇಲ್ಲಿನ ನೈಜ್ಯ ಪರಿಸ್ಥಿತಿಯನ್ನು ವಿವರಿಸಿದ್ದರು. ಸಚಿವರ ಆದೇಶದನ್ವಯ ಇದೀಗ ಲಿಖಿತ ಆದೇಶ ಮಂಜೂರಾಗಿದ್ದು ೨ ಪುಂಡಾನೆಯನ್ನು ಸೆರೆ ಹಿಡಿಯಲು ಇಲಾಖೆಯ ಸಿಬ್ಬಂದಿಗಳು ಸನ್ನದ್ದರಾಗಿದ್ದಾರೆ.

ಚೆಂಬು ಗ್ರಾಮದ ದಬ್ಬಡ್ಕದಲ್ಲಿ ನಡೆದ ಘಟನೆಯ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆಯ ವಿವಿಧ ತಂಡಗಳು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಎಲ್ಲಾ ಪ್ರಯತ್ನಗಳನ್ನು ಕೈಗೊಂಡಿದೆ. ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿದ ಸಂದರ್ಭ ಕಾಡಾನೆಯನ್ನು ಸೆರೆ ಹಿಡಿಯಲು ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಶಾಸಕರ ಪ್ರಯತ್ನದಿಂದ ಅನುಮತಿ ದೊರೆತಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಕೆಲವು ಮಾನದಂಡಗಳನ್ನು ಅನುಸರಿಸಿ ಪುಂಡಾನೆಯನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಕೊಡಗಿನ ಮತ್ತಿಗೋಡು ಬಳ್ಳೆಕ್ಯಾಂಪ್‌ನಲ್ಲಿ ಹಿಡಿದ ಪುಂಡಾನೆಯನ್ನು ಪುನರ್ವಸತಿ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.