ಮಡಿಕೇರಿ, ಆ. ೧೧: ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖ ಮಾನದಂಡ ವಾಗದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ, ಮಡಿಕೇರಿ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಎ.ನಿರAಜನ್ ಕರೆ ನೀಡಿದರು. ನಗರದ ಕೊಡಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಜಿಲ್ಲೆಯ ಪತ್ರಕರ್ತರ ೪೭ ವಿದ್ಯಾರ್ಥಿಗಳಿಗೆ ರೂ. ೨.೧೯ಲಕ್ಷ ವೆಚ್ಚದಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಿರಂಜನ್ ಮಾತನಾಡಿದರು.

ಪತ್ರಕರ್ತರ ಮಕ್ಕಳಲ್ಲಿನ ಶೈಕ್ಷಣಿಕ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪತ್ರಿಕಾಭವನ ಟ್ರಸ್ಟ್ ನೀಡುತ್ತಿರುವ ವಿದ್ಯಾನಿಧಿ ಕಾರಣವಾಗಲಿ ಎಂದು ಹಾರೈಸಿದರಲ್ಲದೆ, ಜಿಲ್ಲೆಯಾದ್ಯಂತಲಿನ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಮನೆಯೊಳಕ್ಕೆ ಆಟದ ಮೈದಾನದಿಂದ ಮಕ್ಕಳನ್ನು ಕರೆತರುವುದೇ ಪೋಷಕರಿಗೆ ಸಮಸ್ಯೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಮೊಬೈಲ್ ದಾಸ ರಾಗಿರುವ ಮಕ್ಕಳನ್ನು ಮನೆಯಿಂದ ಹೊರಕ್ಕೆ ಕರೆತರುವುದೇ ಪೋಷಕರ ಪಾಲಿಗೆ ಸವಾಲಾಗಿದೆ ಎಂದು ವಿಷಾದಿಸಿದ ನಿರಂಜನ್, ಪೋಷಕರಾಗಿ ನಾವೇನು ಮಾಡುತ್ತೇವೆಯೋ ಅದನ್ನೇ ಮಕ್ಕಳೂ ಅನುಸರಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಈಗಿನ ಮಕ್ಕಳು ತಗ್ಗಿಬಗ್ಗುವುದಕ್ಕೆ ವಿನಯವಂತಿಕೆ ಕಾರಣ ಎಂದು ಭಾವಿಸುವುದಕ್ಕಿಂತ ಮೊಬೈಲ್‌ನಲ್ಲಿ ಹುದುಗಿ ಹೋಗಿ ಕತ್ತು ತಗ್ಗಿಬಗ್ಗಿರುವುದೇ ಮುಖ್ಯ ಕಾರಣ ಎಂದೂ ನಿರಂಜನ್ ಮೊಬೈಲ್ ವ್ಯಸನದ ಮಕ್ಕಳ ಬಗ್ಗೆ ವಿಶ್ಲೇಷಿಸಿದರು. ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಮಕ್ಕಳು ಮೂಕರಂತೆ ಸಂಜ್ಞೆಗಳನ್ನು ಬಳಸಿಯೇ ವ್ಯವಹರಿಸುವ ಕಾಲವೂ ದೂರವಿಲ್ಲ ಎಂದೂ ಅವರು ಎಚ್ಚರಿಸಿದರು.

ಕೊಡಗು ಜಿಲ್ಲೆ ಕಿರಿಯರಿಲ್ಲದೇ ಹಿರಿಯರ ಬೀಡಾಗುತ್ತಿದೆ. ಉದ್ಯೋಗವರಸಿ ಕಿರಿಯರು ಮಹಾನಗರಗಳಿಗೆ ತೆರಳಿ ಹಿರಿಯರು ಮಾತ್ರ ಕೊಡಗಿನಲ್ಲಿರುವಂತಾಗಿದೆ. ಅಲೆಮಾರಿಗಳಂತೆ ಕೊಡಗಿನಿಂದ ವಿಮುಖರಾಗುತ್ತಿರುವ ಯುವಪೀಳಿಗೆ ಯನ್ನು ಮತ್ತೆ ಕೊಡಗಿನತ್ತ ಕರೆತರುವ ಪ್ರಯತ್ನವಾಗಬೇಕೆಂದೂ ನಿರಂಜನ್ ಹೇಳಿದರು. ಆಸ್ಪತ್ರೆ, ಸೆರೆಮನೆ ಮತ್ತು ಶವಾಗಾರಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅಲ್ಲಿನ ಸ್ಥಿತಿಗತಿ ಪರಿಚಯಿಸಿದರೆ ಜೀವನಮೌಲ್ಯದ ಅರಿವುಂಟಾಗುತ್ತದೆ ಎಂದೂ ಅವರು ಹೇಳಿದರು.

ತನ್ನ ಪುತ್ರ ತನ್ಮಯ್ ಎಸ್ ಎಸ್ ಎಲ್ ಸಿಯಲ್ಲಿ ೬೨೫ ಅಂಕಗಳಿಗೆ ೬೨೫ ರಷ್ಟು ಸಂಪೂರ್ಣ ಅಂಕಗಳಿಸಿದ್ದರೂ ಸರ್ಕಾರ ಸನ್ಮಾನದ ಗೌರವ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ನೀಡಲಿಲ್ಲ ಎಂದು ವಿಷಾದಿಸಿದ ನಿರಂಜನ್. ಹೀಗಾಗದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣಕ್ಕೆ ಪ್ರಯೋಜನಕಾರಿಯಾದ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿದರೆ ಸಾಧಕ ವಿದ್ಯಾರ್ಥಿಗಳಿಗೆ ಸರ್ಕಾರ ನಿಜವಾದ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದೂ ಸಲಹೆ ನೀಡಿದರು.

ಪತ್ರಿಕಾಭವನದ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಮಾತನಾಡಿ, ಸಾಮಾಜಿಕ ಚಿಂತನೆಯೊAದಿಗೆ ಪತ್ರಿಕಾಭವನ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಅಕ್ಟೋಬರ್ ನಿಂದ ಪತ್ರಿಕಾಭವನ ಟ್ರಸ್ಟ್ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ ಎಂದು ಹೇಳಿದರು. ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಸಮಾಜಮುಖಿ ಯಾಗಿರುವ ಅನೇಕ ಸಂಘಸAಸ್ಥೆಗಳಿಗೆ ಪತ್ರಿಕಾಭವನ ಟ್ರಸ್ಟ್ ನೆರವಾಗುತ್ತಿದೆ ಎಂದೂ ರಮೇಶ್ ಹೇಳಿದರು.

ಪತ್ರಿಕಾಭವನ ಟ್ರಸ್ಟ್ನ ಟ್ರಸ್ಟಿ ಜಿ.ಚಿದ್ವಿಲಾಸ್ ಮಾತನಾಡಿ, ಹಳೇ ಕಾಲದಲ್ಲಿ ಯಾರಿಗಾದರೂ ದಾನ ಕೊಟ್ಟಿದ್ದು ಬೇರೆಯವರಿಗೆ ಗೊತ್ತಾಗಬಾರದು ಎಂಬ ಮನೋಭಾವವಿತ್ತು. ಆದರೆ ಈಗಿನ ಕಾಲದಲ್ಲಿ ದಾನ, ಕೊಡುಗೆ ನೀಡಿದ್ದು ಸಾರ್ವಜನಿಕವಾಗಿ ತಿಳಿದಾಗ ಅಂಥ ದಾನಿಗಳಿಗೆ ತೃಪ್ತಿಯಾಗುತ್ತದೆಯಲ್ಲದೇ, ಇತರ ದಾನಿಗಳಿಗೂ ಕೊಡುಗೆ ನೀಡಲು ಪ್ರೇರಣೆಯಾಗುತ್ತದೆ ಎಂದರು. ವಿದ್ಯಾನಿಧಿ ಪಡೆದುಕೊಂಡ ವಿದ್ಯಾರ್ಥಿ ಗಳು ತಮ್ಮ ಹೊಣೆಗಾರಿಕೆ ಹೆಚ್ಚಾಗಿದೆ ಎಂಬ ಮನೋಭಾವನೆಯಿಂದ ಶೈಕ್ಷಣಿಕ ಸಾಧನೆಯತ್ತ ಹೆಚ್ಚಿನ ಗಮನ ನೀಡಬೇಕೆಂದೂ ಚಿದ್ವಿಲಾಸ್ ಕರೆ ನೀಡಿದರು.

ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿ, ಕಳೆದ ವರ್ಷ ಜಿಲ್ಲೆಯ ೩೬ ವಿದ್ಯಾರ್ಥಿಗಳಿಗೆ ರೂ. ೧.೬೦ ಲಕ್ಷ ವಿದ್ಯಾನಿಧಿ ವಿತರಿಸಿದ್ದ ಟ್ರಸ್ಟ್ ಎರಡನೇ ವರ್ಷದಲ್ಲಿ ೪೮ ವಿದ್ಯಾರ್ಥಿಗಳಿಗೆ ೨.೧೯ ಲಕ್ಷ ರೂಪಾಯಿಗಳಷ್ಟು ವಿದ್ಯಾನಿಧಿಯನ್ನು ಹಂಚಿಕೆ ಮಾಡಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಭವನ ಟ್ರಸ್ಟ್ನ ಟ್ರಸ್ಟಿಗಳಾದ ಅನಿಲ್ ಹೆಚ್.ಟಿ. ನಿರೂಪಿಸಿ, ಖಜಾಂಜಿ ಕೆ. ತಿಮ್ಮಪ್ಪ ಸ್ವಾಗತಿಸಿ, ಮುಲ್ಲೇಂಗಡ ಮಧೋಷ್ ಪೂವಯ್ಯ ವಂದಿಸಿದ ಕಾರ್ಯಕ್ರಮದಲ್ಲಿ ನವೀನ್ ಚಿಣ್ಣಪ್ಪ ಪ್ರಾರ್ಥಿಸಿದರು. ಟ್ರಸ್ಟಿಗಳಾದ ಶ್ರೀಧರ್ ಹೂವಲ್ಲಿ, ವಿ.ಪಿ.ಸುರೇಶ್ ಹಾಜರಿದ್ದರು.