ಸಿ ಮತ್ತು ಡಿ ಜಾಗದ ಸಮಸ್ಯೆಯ ಬಗ್ಗೆ ರೈತ ಹೋರಾಟ ಸಮಿತಿ ಹೋರಾಟಕ್ಕಿಳಿದ ಮೊದಲ ದಿನದಿಂದ ಈವರೆಗೂ ತಾನು ಜೊತೆಯಾಗಿದ್ದು, ಮುಂದೆಯೂ ರೈತರ ಹಿತಕಾಯಲು ಬದ್ಧನಾಗಿದ್ದೇನೆ. ಅಂತೆಯೇ ಕಾನೂನು ಭಾಗದ ಹೋರಾಟಕ್ಕೆ ಈಗಲೂ ಸಿದ್ಧನಿದ್ದೇನೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್ ೪ ವಿಚಾರಕ್ಕೆ ಸಂಬAಧಿಸಿದAತೆ ತಾನು ರೈತರ ಪರ ನಿಂತಿದ್ದು, ಈಗಾಗಲೇ ಸಮಿತಿಯ ನಿಯೋಗವನ್ನು ಮುಖ್ಯಮಂತ್ರಿಗಳ ಸಹಿತ ಸಂಬAಧಿಸಿದ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿಸಿ ಮಾತನಾಡಿದ್ದೇನೆ. ನಮ್ಮ ಕಡೆಯಿಂದಲೂ ಕಾನೂನು ಹೋರಾಟಕ್ಕೆ ಬೇಕಾದ ಎಲ್ಲಾ ನೆರವನ್ನೂ ಒದಗಿಸಿದ್ದೇನೆ. ಇದು ರೈತ ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೂ ತಿಳಿದಿದೆ. ಸಿ ಮತ್ತು ಡಿ ಜಾಗದ ಸಮಸ್ಯೆ ಯಾವ ಹಂತದಲ್ಲಿದೆ ಎಂಬುದೂ ಸಹ ಸಮಿತಿಯ ಅರಿವಿಗೆ ಬಂದಿದೆ ಎಂದು ಶಾಸಕ ಡಾ. ಮಂತರ್ ಗೌಡ ‘ಶಕ್ತಿ’ಯೊಂದಿಗೆ ಹೇಳಿದ್ದಾರೆ.

ಸಿ ಅಂಡ್ ಡಿ ಸಮಸ್ಯೆ ನಿನ್ನೆ ಮೊನ್ನೆಯದಲ್ಲ; ೧೯೭೮ರಿಂದಲೇ ಈ ಸಮಸ್ಯೆ ಉದ್ಭವವಾಗಿದೆ. ಕೆಲ ಅಧಿಕಾರಿಗಳ ವೈಫಲ್ಯದಿಂದಾಗಿ ರೈತರು ಇಂದಿಗೂ ಸಮಸ್ಯೆಗೆ ಸಿಲುಕಿದ್ದಾರೆ. ಸಿ ಮತ್ತು ಡಿ ಹಾಗೂ ಸೆಕ್ಷನ್ -೪ ಬೇರೆ ಬೇರೆ. ಕೆಲವು ಭಾಗದಲ್ಲಿ ಮಾತ್ರ ಸೆಕ್ಷನ್೪ ವ್ಯಾಪ್ತಿಯೊಳಗೆ ಸಿ ಮತ್ತು ಡಿ ಜಮೀನು ಬಂದಿದೆ. ಈ ಹಿಂದೆಯೇ ಸಿ ಮತ್ತು ಡಿ ಭೂಮಿಯನ್ನು ಲ್ಯಾಂಡ್ ಬ್ಯಾಂಕಿಗೆ ಹಸ್ತಾಂತರ ಮಾಡಲಾಗಿದೆ. ಈ ವಿಚಾರ ಇದೀಗ ಕಾನೂನು ವ್ಯಾಪ್ತಿಯೊಳಗೆ ಸೇರಿದೆ. ಈ ಹಿನ್ನೆಲೆ ಕಾನೂನು ಭಾಗದಲ್ಲಿಯೇ ನಾವು ಹೋರಾಟ ಮಾಡಬೇಕಿದ್ದು, ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನವನ್ನೂ ಶಾಸಕನಾಗಿ ತಾನು ಮಾಡುತ್ತಿದ್ದೇನೆ. ರೈತರ ಹಿತಕಾಯುವುದೇ ಅಂತಿಮವಾಗಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

ರೈತರ ಪರವಾಗಿ ಸಾರ್ವಜನಿಕ ಹೋರಾಟ ಮುಖ್ಯವಾಗಿದ್ದರೂ, ವಿಚಾರ ಕಾನೂನು ಪರಿಧಿಯೊಳಗೆ ಸೇರಿರುವುದರಿಂದ ಕಾನೂನು ಭಾಗದ ಹೋರಾಟವೂ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈವರೆಗೂ ಸಹಕಾರ ನೀಡಿದ್ದು, ಮುಂದೆಯೂ ರೈತರ ಹಿತಕ್ಕಾಗಿ ಕಾನೂನು ಭಾಗದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಡಾ. ಮಂತರ್ ಗೌಡ ಘೋಷಿಸಿದ್ದಾರೆ.