ಜಿ. ಚಿದ್ವಿಲಾಸ್
ಮಡಿಕೇರಿ, ಆ. ೧೦: ಮಡಿಕೇರಿಯ ರಾಜಾಸೀಟಿನಲ್ಲಿ ಗ್ಲಾಸ್ಬ್ರಿಡ್ಜ್ ನಿರ್ಮಾಣಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಕಾನೂನಿನ ಪ್ರಕಾರ ಅಲ್ಲಿ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲವೆಂದು ದಾಖಲೆಗಳು ಹೇಳುತ್ತಿವೆ.
೧೯೭೫ರ ಗೆಜೆಟ್ ನೋಟಿಫಿಕೇಶನ್- ೨೦೧೪ರಲ್ಲಿ ತೋಟಗಾರಿಕಾ ಇಲಾಖೆ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆ - ೨೦೧೮ರ ಭೂಕುಸಿತ ಬಳಿಕ ಬದಲಾದ ಕಾನೂನು ಇವೆಲ್ಲವುಗಳ ಆಧಾರದಲ್ಲಿ ರಾಜಾಸೀಟಿನ ಒಳಭಾಗದಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸಲು ಅವಕಾಶವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ತಾ. ೨೨.೦೫.೧೯೭೫ರಲ್ಲಿ ರಾಜ್ಯ ಸರ್ಕಾರ ‘ಕರ್ನಾಟಕ ಸರ್ಕಾರ ಉದ್ಯಾನವನಗಳ ಸಂರಕ್ಷಣಾ ಕಾಯ್ದೆ - ೧೯೭೫' ಅನ್ನು ಗೆಜೆಟ್ ಮೂಲಕ ಪ್ರಕಟಿಸಿತ್ತು. ಈ ಕಾಯ್ದೆಯಲ್ಲಿ ಸ್ಪಷ್ಟವಾಗಿ ತೋಟಗಾರಿಕಾ ಉದ್ಯಾನವನವನ್ನು ರಕ್ಷಿಸುವ ಮತ್ತು ನಿರ್ವಹಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ಉಲ್ಲೇಖಿಸಲಾಗಿದೆ. ಇತರ ಯಾವುದೇ ಕ್ರಮಗಳು ಪಾರ್ಕ್ ಅಥವಾ ಉದ್ಯಾನವನವನ್ನು ಅಭಿವೃದ್ಧಿಪಡಿಸುವ ಮತ್ತು ಬಳಕೆಗೆ ಉಪಯುಕ್ತವಾಗುವಂತಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಅಲ್ಲದೆ ಉದ್ಯಾನವನದಲ್ಲಿರುವ ಯಾವುದೇ ಜಾಗವನ್ನಾಗಲಿ, ಕಟ್ಟಡವನ್ನಾಗಲಿ, ಮಾರಾಟ ಮಾಡುವುದಾಗಲಿ, ಗುತ್ತಿಗೆ ನೀಡುವುದಾಗಲಿ, ಉಡುಗೊರೆ ನೀಡುವುದಾಗಲಿ, ಅಡವು ಇಡುವುದಾಗಲಿ ಅಥವಾ ಈ ಜಾಗದಲ್ಲಿ ಯಾವುದೇ ಚಟುವಟಿಕೆಗಳಿಗೆ ಯಾವುದೇ ಲೈಸೆನ್ಸ್ ನೀಡುವಂತಿಲ್ಲ ಎಂದು ಸ್ಟಷ್ಟಪಡಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಲೈಸೆನ್ಸ್ ನೀಡಿದಲ್ಲಿ ಅವು ಅನೂರ್ಜಿತವಾಗಲಿವೆ ಎಂದು ಸ್ಪಷ್ಟವಾಗಿ ಮುದ್ರಿಸಲಾಗಿದೆ.
ನ್ಯಾಯಾಲಯದಲ್ಲಿ ಲಿಖಿತ ಹೇಳಿಕೆ
೨೦೧೪ರಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆ ಗ್ರೇಟರ್ ರಾಜಾಸೀಟ್ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆ ಸಂದರ್ಭ ಅಲ್ಲಿ ಕಟ್ಟಡ ಕಾಮಗಾರಿಗಳು ನಡೆದು ಪ್ರಕೃತಿ ಸೌಂದರ್ಯ ಹಾಳಾಗಬಹುದು ಎಂಬ ಆತಂಕದಿAದ ವಕೀಲರುಗಳಾದ ಬಿ.ಬಿ. ಆನಂದ, ಕೆ.ಕೆ. ನಿರ್ಮಲಾನಂದ, ಎಂ.ಎಸ್. ಬಿದ್ದಪ್ಪ, ಟಿ.ಹೆಚ್. ಅಬೂಬಕರ್, ಸಿ.ಟಿ. ಮುತ್ತಪ್ಪ ಇವರುಗಳು ‘ವಕೀಲ ಸ್ಪಂದನ’ ಎಂಬ ಸಂಘಟನೆ ಮೂಲಕ ಮಡಿಕೇರಿ ನ್ಯಾಯಾಲಯದಲ್ಲಿ ಯೋಜನೆ ವಿರುದ್ಧ ಮೊಕದ್ದಮೆ ಹೂಡಿದರು.
ಅದಕ್ಕೆ ಲಿಖಿತವಾಗಿ ಜಂಟಿ ಹೇಳಿಕೆ ನೀಡಿದ ತೋಟಗಾರಿಕಾ ಉಪನಿರ್ದೇಶಕರು ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು, ರಾಜಾಸೀಟಿನಲ್ಲಿ ಹೊಸ ಗಿಡ, ಪೊದೆ, ಗಿಡಮೂಲಿಕೆಗಳನ್ನು ಬೆಳೆಯುವ ಮೂಲಕ ಸಸ್ಯೋದ್ಯಾನವನ್ನು ಅಭಿವೃದ್ಧಿ ಪಡಿಸಲಾಗುವುದೇ ಹೊರತು ಅಲ್ಲಿ ಯಾವುದೇ ಕೃತಕ ಗುಹೆಗಳು, ಜಲಪಾತಗಳು, ಸುರಂಗದ ಅಕ್ವೇರಿಯಂ, ಗಾಜಿನ ಮನೆಗಳನ್ನು ನಿರ್ಮಿಸುವುದಿಲ್ಲ ಎಂದು ಲಿಖಿತ ಹೇಳಿಕೆ ಸಲ್ಲಿಸಿದ್ದರು.
ಆ ಹಿನ್ನೆಲೆಯಲ್ಲಿ ಗ್ರೇಟರ್ ರಾಜಾಸೀಟಿನಲ್ಲಿ ಪಾದಚಾರಿ ಮಾರ್ಗಗಳು ಮತ್ತು ಕಬ್ಬಿಣ ಬಳಸಿ ಗಜೆಬೋ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಯಿತು. ಇದೇ ಅಂಶವನ್ನು ಮುಂದಿಟ್ಟುಕೊAಡು ‘ವಕೀಲ ಸ್ಪಂದನ’ ಇದೀಗ ಹೊಸ ಯೋಜನೆ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲು ನಿರ್ಧರಿಸಿದೆ.
೨೦೧೮ರ ಬಳಿಕದ ಕಾನೂನು
೨೦೧೮ರ ಭೂಕುಸಿತದ ದುರಂತ ಬಳಿಕ ಗ್ಲಾಸ್ ಬ್ರಿಡ್ಜ್ನಂತಹ ಯೋಜನೆಗಳನ್ನು ಆರಂಭಿಸಲು ಮೊದಲು ಭೂವಿಜ್ಞಾನ ಇಲಾಖೆ ಜಾಗದ ಮಣ್ಣನ್ನು ಪರಿಶೀಲಿಸಿ ಅಲ್ಲಿ ಯೋಜನೆಯ ಸಾಧ್ಯಾಸಾಧ್ಯತೆ ಬಗ್ಗೆ ಚರ್ಚಿಸಿ ಅನುಮತಿ ನೀಡಿದರಷ್ಟೇ ಅಂತಹ ಸ್ಥಳದಲ್ಲಿ ಯೋಜನೆ ಅನುಷ್ಠಾನ ಸಾಧ್ಯ. ರಾಜಾಸೀಟಿನ ಸಮೀಪದ ಎಲ್ಲಾ ಬಡಾವಣೆಗಳು ಭೂಕುಸಿತ ಪ್ರದೇಶಗಳೆಂದು ಈಗಾಗಲೇ ಗುರುತಿಸಲ್ಪಟ್ಟು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಹಾಗಾಗಿ ರಾಜಾಸೀಟಿನಲ್ಲಿ ಯಾವುದೇ ಯೋಜನೆಗೆ ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ದೊರೆಯುವುದು ಕಷ್ಟ ಸಾಧ್ಯ.
ಜೊತೆಗೆ ಪುರಾತತ್ವ-ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಯಲ್ಲಿ ರಾಜಾಸೀಟು ಒಳಗೆ ಇರುವ ಸ್ಮಾರಕ ಇದ್ದು, ಅದರ ೧೦೦ ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ನಿಷೇಧಿಸಲಾಗಿದೆ. ೧೦೦ ರಿಂದ ೨೦೦ ಮೀಟರ್ ವ್ಯಾಪ್ತಿ ‘‘ನಿಯಂತ್ರಿರ ಜಾಗ’’ ಎಂದಿದ್ದರೂ, ಕಡ್ಡಾಯವಾಗಿ ಹೊಸ ಕಟ್ಟಡ ನಿರ್ಮಾಣ ಅಥವಾ ಇರುವ ಕಟ್ಟಡದ ನವೀಕರಣಕ್ಕೆ ಅನುಮತಿ ಅಗತ್ಯವಾಗಿದೆ.
೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಈ ಬಗ್ಗೆ ಈ ವರ್ಷ ಕರ್ನಾಟಕ ಉಚ್ಛ ನ್ಯಾಯಾಲಯ ಕೂಡಾ ಸ್ಪಷ್ಟ ಆದೇಶ ನೀಡಿದ್ದು, ನಿಷೇಧಿತ ಜಾಗದ ವ್ಯಾಪ್ತಿಯಲ್ಲಿ ಖಾಸಗಿ ಮನೆಯಾಗಲೀ ಇತರ ಕಾಮಗಾರಿಗಳಿಗಾಗಲೀ ಅನುಮತಿ ನೀಡಲೇಬಾರದೆಂದು ಸೂಚಿಸಿದೆ. ಇದನ್ನೂ ಮೀರಿ ಅನುಮತಿ ನೀಡುವ ಸ್ಥಳೀಯ ಸಂಸ್ಥೆಗಳಾಗಲಿ; ಇಲಾಖೆಗಳಾಗಲೀ ವಿಚಾರಣೆಗೂ ಕಾನೂನಿನ ಪರಿಣಾಮಗಳಿಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಪ್ರಾಚ್ಯವಸ್ತು ಇಲಾಖೆ ಹೇಳಿಕೆ
ಮಡಿಕೇರಿಯಲ್ಲಿ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳ ಪ್ರಕಾರ ರಾಜಾಸೀಟಿನ ಒಳಭಾಗದ ಸ್ಮಾರಕ ಈ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಉದ್ಯಾನವನ ತೋಟಗಾರಿಕಾ ಇಲಾಖೆಯಡಿ ಇದೆ. ಆದರೆ ಯಾವುದೇ ಕಟ್ಟಡ ಕಾಮಗಾರಿಗಳು ಸ್ಮಾರಕವನ್ನು ಆವರಿಸಿರುವ ಗಡಿಯಿಂದಲೇ ಎಷ್ಟು ದೂರ ಇವೆ ಎಂದು ಗುರುತಿಸಿ ಅನುಮತಿ ನೀಡಲಾಗುತ್ತದೆಯೇ ಹೊರತು ಸ್ಮಾರಕದ ಜಾಗದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನುಮತಿ ಇಲ್ಲದೆ ರಾಜಾಸೀಟಿನ ಒಳಗೆ ಯಾವುದೇ ಕಾಮಗಾರಿಗೆ ವಸ್ತುಗಳು ಸಾಗಿಸಲ್ಪಟ್ಟರೂ ಅವನ್ನು ವಶಡಿಸಿಕೊಂಡು ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿಗೆ ಮಾಹಿತಿ - ಯಂ.ಸಿ. ನಾಣಯ್ಯ
ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವನ್ನು ವಿರೋಧಿಸಿ ಹೇಳಿಕೆ ನೀಡಿರುವ ಮಾಜಿ ಕಾನೂನು ಸಚಿವ ಯಂ.ಸಿ. ನಾಣಯ್ಯ ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಟ್ಸಾö್ಯಪ್ ಸಂದೇಶ ಕಳುಹಿಸಿರುವ ನಾಣಯ್ಯ ಅವರು, ರಾಜಾಸೀಟಿನ ಪ್ರಕೃತಿ ಸೌಂದರ್ಯದ ಬಗ್ಗೆ ವಿವರಿಸಿ ಅಲ್ಲಿ ಯಾವುದೇ ಗ್ಲಾಸ್ ಬ್ರಿಡ್ಜ್ಗೆ ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ. ರಾಜಾಸೀಟಿನಲ್ಲಿ ಯೋಜಿಸಿರುವ ವಾಣಿಜ್ಯ ಉದ್ಯಮಕ್ಕೆ ಕೂಡಲೇ ತಡೆಒಡ್ಡುವಂತೆ ತೋಟಗಾರಿಕಾ ಇಲಾಖೆಗೆ ಸೂಚಿಸಬೇಕೆಂದೂ ಸಂದೇಶದಲ್ಲಿ ವಿನಂತಿಸಿದ್ದಾರೆ.ರಾಜಾಸೀಟಿನ ಮಾಹಿತಿಗೆ ಅರ್ಜಿ
ರಾಜಾಸೀಟು ಉದ್ಯಾನವನ ತೋಟಗಾರಿಕಾ ಇಲಾಖೆಗೆ ಬಂದ ರೀತಿ ಹೇಗೆ ಎಂದು ಪ್ರಶ್ನಿಸಿ ಪರಿಸರವಾದಿ ತಮ್ಮು ಪೂವಯ್ಯ ಮತ್ತು ಇತರರು ಮಾಹಿತಿ ಹಕ್ಕು ಕಾಯ್ದೆಯಡಿ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಈ ಜಾಗವನ್ನು ತೋಟಗಾರಿಕಾ ಇಲಾಖೆ ಹೇಗೆ ಪಡೆಯಿತು ಮತ್ತು ಈ ಬಗ್ಗೆ ಒಪ್ಪಂದ ಆಗಿದ್ದಲ್ಲಿ ಅದರ ಮಾಹಿತಿಯನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಜೊತೆಯಲ್ಲೇ ರಾಜಾಸೀಟಿನ ಗಡಿಯಿಂದ ೧೦೦ ಮೀಟರ್ ಒಳಗೆ ಇರುವ ಖಾಸಗಿ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣವಾಗುತ್ತಿದೆ; ಇದಕ್ಕೆ ಹೇಗೆ ಅನುಮತಿ ನೀಡಲಾಯಿತು ಎಂದೂ ಪ್ರತ್ಯೇಕವಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲಾಗಿದೆ ಎಂದು ತಮ್ಮು ಪೂವಯ್ಯ ತಿಳಿಸಿದ್ದಾರೆ.
ಟೆಂಡರ್ನಲ್ಲಿ ಲೋಪ
ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಕಾರ್ಯದರ್ಶಿಮಟ್ಟದಲ್ಲಿ ಗ್ಲಾಸ್ ಬ್ರಿಡ್ಜ್ಗೆ ಕರೆದ ಟೆಂಡರ್ ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಟೆAಡರ್ ಕರೆಯುವ ಮೊದಲು ಸ್ಥಳೀಯ ಪತ್ರಿಕೆಗಳಲ್ಲಿ ಈ ಬಗ್ಗೆ ಪ್ರಕಟಣೆ ನೀಡುವುದು ಕಡ್ಡಾಯವಾದರೂ, ಅದನ್ನು ಗೌಪ್ಯವಾಗಿ ಮಾಡಿರುವ ಉದ್ದೇಶ, ಟೆಂಡರ್ ಪ್ರಕ್ರಿಯೆಗೆ ಮುನ್ನ ಪ್ರಾಚ್ಯವಸ್ತು ಇಲಾಖೆಯಿಂದ ಅನುಮತಿ ಪಡೆಯಬೇಕಿದ್ದ ನಿಯಮ, ತರಾತುರಿಯಲ್ಲಿ ಒಂದಿಬ್ಬರು ಮಾತ್ರ ಟೆಂಡರ್ನಲ್ಲಿ ಭಾಗವಹಿಸುವಂತೆ ಮಾಡಿರುವುದು, ನ್ಯಾಯಾಲಯಕ್ಕೆ ಕಾಮಗಾರಿಗಳನ್ನು ಮಾಡುವುದಿಲ್ಲವೆಂದು ಬರೆದುಕೊಟ್ಟಿದ್ದರೂ, ಅದನ್ನು ಉಲ್ಲಂಘನೆ ಮಾಡಿ ಕಾಮಗಾರಿಗೆ ಅವಕಾಶ ಕಲ್ಪಿಸಲು ಮುಂದಾಗಿರುವುದು; ಇವುಗಳ ಹಿಂದೆ ಯಾರ ಒತ್ತಡ ಇದೆ ಎಂಬುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ರಾಜಾಸೀಟಿನ ಗ್ಲಾಸ್ ಬ್ರಿಡ್ಜ್ ವಿಷಯ ಜನವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.