ಮಡಿಕೇರಿ, ಆ. ೧೦: ಕೊಡಗು ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ತಾ. ೨೩ ರಂದು ಭಾಗಮಂಡಲದಲ್ಲಿ ೩೩ನೇ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶÀಕಿ ವಿಸ್ಮಯಿ ವಿ.ಟಿ. ಅವರ ಅಧ್ಯಕ್ಷತೆಯಲ್ಲಿ ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಮತ್ತು ಅಯ್ಯಂಗೇರಿ ಶ್ರೀ ಕೃಷ್ಣ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಬೆಳಿಗ್ಗೆ ೯ ಗಂಟೆಯಿAದ ಕ್ರೀಡಾಕೂಟಗಳು ಆರಂಭಗೊಳ್ಳಲಿವೆ. ಸಾರ್ವಜನಿಕ ಪುರುಷರು ಹಾಗೂ ಮಹಿಳೆಯರ (೭ ಮಂದಿಯ ತಂಡ) ವಿಭಾಗಕ್ಕೆ ಹಗ್ಗಜಗ್ಗಾಟ, ಪುರುಷರಿಗೆ ವಾಲಿಬಾಲ್ (೪ ಮಂದಿಯ ತಂಡ) ಮತ್ತು ಮಹಿಳೆಯರಿಗೆ ಥ್ರೋಬಾಲ್ (೬ ಮಂದಿಯ ತಂಡ) ಪಂದ್ಯಾವಳಿ ನಡೆಯಲಿದೆ. ಮಧ್ಯಾಹ್ನ ೧ ಗಂಟೆಯಿAದ ಕೆಸರು ಗದ್ದೆ ಓಟ ನಡೆಯಲಿದ್ದು, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರಿಗೆ, ಪ್ರೌಢಶಾಲಾ, ಪದವಿಪೂರ್ವ ಮತ್ತು ಪದವಿ ಕಾಲೇಜು ಯುವಕ, ಯುವತಿಯರಿಗೆ ಹಾಗೂ ಆಯೋಜಕರಿಗೆ ಓಟದ ಸ್ಪರ್ಧೆ, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಓಟದ ಸ್ಪರ್ಧೆ ನಡೆಯಲಿದೆ. ಸಂಜೆ ಸಾಂಪ್ರದಾಯಿಕ ಪೂಜೆಯ ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ವಿ.ಟಿ ಹಾಗೂ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಮನವಿ ಮಾಡಿದರು. ಸಾರ್ವಜನಿಕ ಹಗ್ಗಜಗ್ಗಾಟಕ್ಕೆ ಸ್ಪರ್ಧಿಸುವ ಪುರುಷರಿಗೆ ರೂ. ೧,೫೦೦, ಮಹಿಳೆಯರು ರೂ. ೧,೦೦೦, ಸಾರ್ವಜನಿಕರ ವಾಲಿಬಾಲ್ ಹಾಗೂ ಥ್ರೋಬಾಲ್‌ಗೆ ತಲಾ ರೂ. ೧,೦೦೦ ಪ್ರವೇಶ ಶುಲ್ಕ ಪಾವತಿಸಬೇಕು. ತಾ. ೨೨ ರ ಸಂಜೆ ೫ ಗಂಟೆಯ ಒಳಗೆ ತಂಡದ ಹೆಸರು ನೋಂದಾಯಿಸಿ ಕೊಳ್ಳುವಂತೆ ತಿಳಿಸಿದರು. ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಆಕರ್ಷಕ ನಗದು, ಪಾರಿತೋಷಕ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು. ವಾಲಿಬಾಲ್ ಮತ್ತು ಥ್ರೋಬಾಲ್ ನೋಂದಾವಣಿಗಾಗಿ ಕಾವೇರಿ ಮನೆ ಭರತ್ ೮೪೩೧೫೧೫೪೦೪, ಹಗ್ಗಜಗ್ಗಾಟ ಬಿದ್ದಿಯಂಡ ಸುಭಾಷ್ ೯೮೪೫೦೫೩೫೦೧ ನ್ನು ಸಂಪರ್ಕಿಸಬಹುದಾಗಿದೆ. ಪೂರ್ವಭಾವಿ ಸಭೆಯಲ್ಲಿ ಯುವ ಒಕ್ಕೂಟದ ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕುಂಜಿಲನ ಎ. ಮೋಹನ್, ಸದಸ್ಯರಾದ ನವೀನ್ ದೇರಳ, ನೆರವಂಡ ನಿಖಿಲ್ ಬೆಳ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.