(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಆ. ೧೦ : ಕೊಡಗು ಜಿಲ್ಲೆ ಕೃಷಿ ಪ್ರಧಾನವಾಗಿದ್ದು ಇಲ್ಲಿ ಪುರಾತನ ಕಾಲದಿಂದ ಭತ್ತದ ಬೆಳೆಯೇ ಪ್ರಾಮುಖ್ಯತೆ ಪಡೆದಿತ್ತು. ಜನರ ಬದುಕಿಗೆ ಭತ್ತವೇ ಆಧಾರವಾಗಿತ್ತಲ್ಲದೆ ಇಲ್ಲಿನ ಹಬ್ಬ ಹರಿದಿನಗಳು ಕೂಡ ಈ ಕೃಷಿಗೆ ಪೂರಕವಾಗಿಯೇ ನಡೆದುಕೊಂಡು ಬಂದಿರುವುದು ವಿಶೇಷ... ಆದರೆ ಈಗ ಕಾಲ ಬದಲಾಗಿದೆ. ಭತ್ತದ ಕೃಷಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಜತೆಗೆ ಈ ಕೃಷಿ ಕೆಲಸ ಕಾರ್ಯ ಭಾರೀ ದುಸ್ತರ ಎಂಬ ಮನೋಭಾವನೆಯಿಂದಾಗಿ ಜಿಲ್ಲೆಯಲ್ಲಿ ಭತ್ತದ ಕೃಷಿ ವರ್ಷಗಳು ಕಳೆದಂತೆ ಕಡಿಮೆಯಾಗುತ್ತಿವೆ. ಪ್ರಸ್ತುತದ ಪರಿಸ್ಥಿತಿಯಲ್ಲಿ ಇನ್ನಷ್ಟು ಸಂಕಷ್ಟಗಳು ಎದುರಾಗುತ್ತಿರುವುದೂ ವಾಸ್ತವ. ವನ್ಯಪ್ರಾಣಿಗಳ ಉಪಟಳ,೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ವಾತಾವರಣದಲ್ಲಿನ ಏರುಪೇರು, ಭೌಗೋಳಿಕ ಬದಲಾವಣೆಗಳು, ಕಾರ್ಮಿಕರ ಸಮಸ್ಯೆ ಮತ್ತಿತರ ಕಾರಣಗಳಿಂದಲೂ ಭತ್ತದ ಕೃಷಿ ಮರೆಯಾಗುತ್ತಿದೆ. ಹಬ್ಬ ಹರಿದಿನಗಳಿಗೆ ಸಾಂಕೇತಿಕ ರೂಪ ಮಾತ್ರ ಕಂಡುಬರುತ್ತಿರುವುದೂ ಕಣ್ಣೆದುರು ಕಾಣುತ್ತಿರುವ ಸತ್ಯ. ಇದಕ್ಕೆ ಉದಾಹರಣೆ ಪ್ರಮುಖ ಹಬ್ಬಗಳಲ್ಲಿ ಒಂದಾದ ಪುತ್ತರಿ (ಹುತ್ತರಿ)ಗೆ ಮನೆಯಂಗಳದ ಹೂ ತೋಟದಲ್ಲೋ, ಹೂ ಕುಂಡದಲ್ಲೋ ಅಥವಾ ಸಣ್ಣ ಕಟ್ಟೆ ಹಾಕಿ ಅದರಲ್ಲಿ ಹಿಡಿಯಷ್ಟು ಭತ್ತವನ್ನು ಬೆಳೆಯುವುದಾಗಿದೆ.
ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿಯಿಂದ ಅಂತರ್‌ಜಲದ ಸಮತೋಲನ ಇರುತ್ತಿತ್ತು. ಸಾಕಷ್ಟು ರೈತರು ಗದ್ದೆಗಳನ್ನು ಹೊಂದಿದ್ದಾರೆ. ಆದರೆ ಸಮಸ್ಯೆಗಳ ಸುಳಿಯಿಂದ ಪಾಳು ಬಿಟ್ಟಿರುವುದು, ಗದ್ದೆಗಳು ಇನ್ನಿತರ ಉದ್ದೇಶಕ್ಕೆ ಪರಿವರ್ತನೆಯಾಗುತ್ತಿರುವುದೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಭತ್ತದ ಬೆಳೆಗೆ ಪ್ರೋತ್ಸಾಹದಾಯಕವಾಗಿ ಸರಕಾರದಿಂದ ಪ್ರೋತ್ಸಾಹವಾಗಿ ಆರ್ಥಿಕ ಸಹಾಯ ಭತ್ತಕ್ಕೆ ಬೆಂಬಲ ಬೆಲೆಯ ಬೇಡಿಕೆಗಳಿದ್ದರೂ ಅದಕ್ಕೆ ಮನ್ನಣೆ ಮತ್ರ ಸಿಗುತ್ತಿಲ್ಲ.
ಸಂಕಷ್ಟದ ನಡುವೆ ಒಂದಷ್ಟು ಪ್ರಯತ್ನ
ಭತ್ತದ ಕೃಷಿ ಕೊಡಗಿನ ಸಾಂಪ್ರದಾಯಿಕ ಹಿನ್ನೆಲೆಯಾಗಿದೆ. ಇದರೊಂದಿಗೆ ಹಬ್ಬ - ಹರಿದಿನಗಳೂ ಕೂಡ ಬೆಸೆದಿರುವುದರಿಂದ ಹಾಗೂ ಜಿಲ್ಲೆಯ ಹಿಂದಿನ ಪರಿಸ್ಥಿತಿ ಯಥಾ ಪ್ರಕಾರ ಉಳಿಯಬೇಕೆಂಬ ಪರಿಕಲ್ಪನೆ ಹಲವರಲ್ಲಿದೆ. ಈ ನಿಟ್ಟಿನಲ್ಲಿ ಪ್ರಸ್ತತದ ದಿನಗಳಲ್ಲಿ ಒಂದಷ್ಟು ಪ್ರಯತ್ನಗಳೂ ಆಗುತ್ತಿವೆ. ವಿದ್ಯಾರ್ಥಿಗಳಲ್ಲಿ ಯುವಜನಾಂಗದಲ್ಲಿ ಇದರತ್ತ ಆಸಕ್ತಿ ಮೂಡಿಸುವ ಜಿಜ್ಞಾಸೆ ಕಂಡುಬರುತ್ತಿದೆ. ಕೆಲವು ಸಂಘಟನೆಗಳು ಆಸಕ್ತ ರೈತರು ಉತ್ಸುಕತೆ ತೋರುತ್ತಿದ್ದಾರೆ.
ಕನೆಕ್ಟಿಂಗ್ ಕೊಡವಾಸ್‌ನಿಂದ ೬ನೇ ಹೆಜ್ಜೆ
ಭತ್ತದ ಕೃಷಿಯ ಪುನರುತ್ಥಾನದ ಪರಿಕಲ್ಪನೆಯೊಂದಿಗೆ ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಕಳೆದ ಹಲವು ವರ್ಷಗಳಿಂದ ಯುವ ಸಮೂಹವನ್ನು ಒಗ್ಗೂಡಿಸಿ ಸಾರ್ವತ್ರಿಕವಾಗಿ ಕೃಷಿ ಮಾಡುವ ಪ್ರಯತ್ನ ಮಾಡುತ್ತಿರುವುದೂ ಒಂದು ಗಮನಾರ್ಹ ವಿಚಾರವಾಗಿದೆ.
ಇದೇ ನಿಟ್ಟಿನಲ್ಲಿ ಸಂಘಟನೆ ಈ ಬಾರಿ ೬ನೇ ವರ್ಷದ ಪ್ರಯತ್ನಕ್ಕೆ ಮುಂದಾಗಿದೆ. ಕಳೆದ ನಾಲ್ಕು ವರ್ಷ ಕಿಗ್ಗಾಲು ಗ್ರಾಮದ ಪುದಿಯೊಕ್ಕಡ ಕುಟುಂಬದ ಗದ್ದೆಯಲ್ಲಿ ಆರಂಭಿಕ ಕಸರತ್ತು ನಡೆದಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿರುವ ಯುವಕ ಯುವತಿಯರು, ಐಟಿ-ಬಿಟಿ ಉದ್ಯೋಗಿಗಳನ್ನು ಸೇರಿಸಿ ಯುವ ಸಂಘಟನೆಗಳ ಸಹಭಾಗಿತ್ವದಲ್ಲಿ ಭತ್ತ ಬೆಳೆಯಲಾಗಿತ್ತು. ಕಳೆದ ವರ್ಷ ಬೊಳ್ಳರಿಮಾಡು ಗ್ರಾಮದಲ್ಲಿ ಸುಮಾರು ೧೫ ವರ್ಷಗಳಿಂದ ಪಾಳುಬಿದ್ದಿದ್ದ ಎರಡು ಕುಟುಂಬಕ್ಕೆ ಸೇರಿದ ೩೮ ಎಕರೆ ಗದ್ದೆಗೆ ಲಕ್ಷಾಂತರ ವೆಚ್ಚದಲ್ಲಿ ಕಾಯಕಲ್ಪ ನೀಡಲಾಗಿತ್ತು. ಇದೀಗ ೬ನೇ ಹೆಜ್ಜೆಯಾಗಿ ಮುತ್ತಾರ್ಮುಡಿ ಗ್ರಾಮದಲ್ಲಿ ೧೦ ಎಕರೆ ಗದ್ದೆಯಲ್ಲಿ ಭತ್ತದ ನಾಟಿ ಮಾಡಲಾಗುತ್ತಿದೆ. ಅಲ್ಲಿನ ಕೆಂಬುಡ್‌ತAಡ ಕುಟುಂಬಕ್ಕೆ ಸೇರಿರುವ ಈ ಗದ್ದೆ ೨೦೧೭ ರಿಂದ ಪಾಳು ಬಿದ್ದಿದೆ. ಈ ಗದ್ದೆಯನ್ನು ಮುಂದಿನ ಐದು ವರ್ಷಕ್ಕೆ ಗುತ್ತಿಗೆ ಮೂಲಕ ಪಡೆದುಕೊಳ್ಳಲಾಗಿದ್ದು, ಈ ೧೦ ಎಕರೆ ಪ್ರದೇಶವನ್ನು ಮರು ರೂಪಿತಗೊಳಿಸಿ ಈ ಬಾರಿ ಭತ್ತ ಬೆಳೆಯಲಾಗುತ್ತಿದೆ. ಈಗಾಗಲೇ ಇದರ ಅಗತ್ಯ ಸಿದ್ಧತೆಗಳು ನಡೆದಿದ್ದು ಬಿತ್ತನೆ ಕಾರ್ಯವೂ ನಡೆದು ಸಸಿಮಡಿ ಸಿದ್ಧಗೊಳ್ಳುತ್ತಿದೆ.
ತಾ. ೧೬ರಂದು ‘ನಾಟಿ ಪಣಿ’
ನಾಟಿ ಪಣಿ-೨೦೨೫’ ಹೆಸರಿನಲ್ಲಿ ಕನೆಕ್ಟಿಂತಗ್ ಕೊಡವಾಸ್‌ನಿಂದ ಈ ಬಾರಿಯ ನಾಟಿ ಕೆಲಸ ಆಗಸ್ಟ್ ೧೬ರಂದು ಜರುಗಲಿದೆ. ಸಾಮೂಹಿಕವಾದ ಈ ಕಾರ್ಯದಲ್ಲಿ ಹಲವು ಸಂಘಟನೆಗಳು ಕೈಜೋಡಿಸುತ್ತಿವೆ. ಗದ್ದೆ ನಾಟಿ ಕೆಲಸಕ್ಕಾಗಿ ಸಜ್ಜಾಗುತ್ತಿದೆ.
ಸಂಘಟನೆಗಳು : ನಾಟಿ ಕೆಲಸಕ್ಕೆ ರೂಟ್ಸ್ ಆಫ್ ಕೊಡಗು, ಪೊನ್ನಂಪೇಟೆ ಕೊಡಗು ಸೈಂಟಿಸ್ಟ್÷್ಸ ಫೋರಂ, ಕೊಡವ ಸಮಾಜ ಯೂತ್ ವಿಂಗ್ ಮೈಸೂರು, ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ ಮೈಸೂರು, ಕೊಡವ ಸಮಾಜ ಯೂತ್ ಕೌನ್ಸಿಲ್ ಬೆಂಗಳೂರು, ಕೊಡವ ವೀರ‍್ಸ್ ಕ್ಲಬ್, ವೀರಾಜಪೇಟೆಯ ಪ್ರಗತಿ ಶಾಲೆ, ಕೆಂಬುಡ್‌ತAಡ ಕುಟುಂಬಸ್ಥರು ಕೈಜೋಡಿಸುತ್ತಿದ್ದಾರೆ. ಬಾಳೆಲೆಯ ಬಾಂಡಿAಗ್ ಬ್ಲೂಮ್ಸ್ ಸಂಘದ ೨೦ಕ್ಕೂ ಅಧಿಕ ಮಹಿಳೆಯರೂ ಈ ಬಾರಿಯ ನಾಟಿಪಣಿ ಕೆಲಸಕ್ಕೆ ಉತ್ಸುಕತೆ ತೋರಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಮುಂದಿನ ವರ್ಷ ಟಿ. ಶೆಟ್ಟಿಗೇರಿ ವಗರೆಯಲ್ಲಿ
೭ನೇ ವರ್ಷದ ಪ್ರಯತ್ನವಾಗಿ ಮುಂದಿನ ವರ್ಷ ಟಿ.ಶೆಟ್ಟಿಗೇರಿಯ ವಗರೆ ಗ್ರಾಮದಲ್ಲಿ ಸುಮಾರು ೩೦ ಎಕರೆ ಗದ್ದೆಯಲ್ಲಿ ನಾಟಿ ಮಾಡುವ ಯೋಜನೆಯೂ ಈಗಾಗಲೇ ರೂಪಿತವಾಗಿದೆ. ಅಲ್ಲಿನ ಕಟ್ಟೇರ ಕುಟುಂಬದ ಗದ್ದೆಯಲ್ಲಿ ಮುಂದಿನ ವರ್ಷ ಹೊಸ ಪ್ರಯತ್ನ ನಡೆಯಲಿದೆ. ಜತೆಗೆ ಮುತ್ತಾರ್ಮುಡಿಯ ಈಗಿನ ಗದ್ದೆಯಲ್ಲೂ ಕೃಷಿ ಕೆಲಸ ಮುಂದುವರಿಯಲಿದೆ ಎಂದು ಕನೆಕ್ಟಿಂಗ್ ಕೊಡವಾಸ್‌ನ ಶಾಂತೆಯAಡ ನಿರನ್ ನಾಚಪ್ಪ ತಿಳಿಸಿದ್ದಾರೆ.