ಚೆಯ್ಯಂಡಾಣೆ, ಆ. ೧೦: ನಾಪೋಕ್ಲುವಿನಿಂದ ಕೈಕಾಡು-ಪಾರಾಣೆ ಮಾರ್ಗವಾಗಿ ವೀರಾಜಪೇಟೆಗೆ ತೆರಳುವ ಮುಖ್ಯರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಕೈಕಾಡು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ನಾಪೋಕ್ಲು-ವೀರಾಜಪೇಟೆ ಮುಖ್ಯರಸ್ತೆಯ ಕೈಕಾಡು ಗ್ರಾಮದ ಬಳಿ ರಸ್ತೆ ಬದಿಯ ತೋಟದಿಂದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಮರ ಬೀಳುವ ಸಂದರ್ಭ ಯಾವುದೇ ವಾಹನ ಸಂಚಾರ ಇಲ್ಲದ್ದರಿಂದ ಅನಾಹುತ ತಪ್ಪಿದೆ. ರಸ್ತೆಗೆ ಮರ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ ಅವರು ಸ್ಥಳೀಯರ ಹಾಗೂ ಸಾರ್ವಜನಿಕರ ಸಹಕಾರದಿಂದ ರಸ್ತೆಯಲ್ಲಿದ್ದ ಮರವನ್ನು ಯಂತ್ರೋಪಕರಣ ಬಳಸಿ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಗ್ರಾಮಸ್ಥರಾದ ನಾಯಕಂಡ ಅಮಿತ್, ಕದ್ದಣಿಯಂಡ ಮನು, ಮುಕ್ಕಾಟಿರ ಪುನೀತ್, ಅಪ್ಪನೆರವಂಡ ಕೌಶಿಕ್, ಹರೀಶ್, ಕೂತಂಡ ರವಿ, ಬೊಳ್ಳಂಡ ನಿರನ್, ಪೇರಿಯಂಡ ದೀಪು, ಮೂಕಂಡಬಾಣೆ ರಘು ಸೇರಿದಂತೆ ಮತ್ತಿತರರು ಮರ ತೆರವುಗೊಳಿಸಲು ಸಹಕರಿಸಿದರು.