ಸಿದ್ದಾಪುರ, ಆ. ೯: ಚಲಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿ ಕಾರ್ಮಿಕನನ್ನು ಗಾಯಗೊಳಿಸಿದ್ದು, ಆಟೋ ಕೂಡ ಜಖಂಗೊAಡ ಘಟನೆ ಇಂಜಿಲಗೆರೆಯ ಶ್ರೀ ಮುತ್ತಪ್ಪ ದೇವಾಲಯದ ಬಳಿ ನಡೆದಿದೆ.

ಇಂಜಿಲಗೆರೆ ಪುಲಿಯೇರಿ ನಿವಾಸಿ ಪ್ರದೀಪ್ ಗಾಯಗೊಂಡಿದ್ದು, ಫಿರೋಜ್ ಅವರಿಗೆ ಸೇರಿದ ಆಟೋ ರಿಕ್ಷಾಕ್ಕೆ ಹಾನಿ ಸಂಭವಿಸಿದೆ. ಆಟೋ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಅದೃಷ್ಟವಶಾತ್ ದಾಳಿಯಿಂದ ಪಾರಾಗಿದ್ದಾರೆ.

ತಾ. ೮ ರಂದು ಮಾಲ್ದಾರೆಯಿಂದ ಬೈಕಿನಲ್ಲಿ ಸಿದ್ದಾಪುರದತ್ತ ತೆರಳುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದು ೨೪ ಗಂಟೆ ಕಳೆಯುವ ಮುನ್ನವೇ ಈ ಘಟನೆ ಸಂಭವಿಸಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಶನಿವಾರ ಬೆಳಿಗ್ಗೆ ೭.೪೫ಕ್ಕೆ ಇಂಜಿಲಗೆರೆಯ ನಿವಾಸಿ ಆಟೋ ಚಾಲಕ ಫಿರೋಜ್ ಅವರ ಆಟೋದಲ್ಲಿ ಪ್ರದೀಪ್ ಹಾಗೂ ಇತರ ಇಬ್ಬರು ಕಾರ್ಮಿಕರು ಸಿದ್ದಾಪುರ ಕಡೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಇಂಜಿಲಗೆರೆಯ ಶ್ರೀ ಮುತ್ತಪ್ಪ ದೇವಾಲಯದ ಸಮೀಪದ ಕಾಫಿ ತೋಟದಿಂದ

(ಮೊದಲ ಪುಟದಿಂದ) ಹಠಾತ್ತನೆ ಒಂಟಿ ಸಲಗ ಬಂದು ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ದಾಳಿಗೈದಿದೆ. ಈ ಸಂದರ್ಭ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರದೀಪ್ ಆಟೋರಿಕ್ಷಾದ ಬದಿಯಲ್ಲಿ ಕುಳಿತ್ತಿದ್ದರು. ಒಂಟಿ ಸಲಗ ಏಕಾಏಕಿ ದಾಳಿ ನಡೆಸಿ ತನ್ನ ದಂತದಿAದ ಆಟೋಕ್ಕೆ ದಾಳಿ ನಡೆಸಿದಲ್ಲದೆ ಒಳಗೆ ಕುಳಿತ್ತಿದ್ದ ಪ್ರಯಾಣಿಕರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ಸಂದರ್ಭ ಆನೆ ಪ್ರದೀಪ್ ತೊಡೆಯ ಭಾಗಕ್ಕೆ ದಂತದಿAದ ಚುಚ್ಚಿದೆ ಎಂದು ಗಾಯಾಳು ಪ್ರದೀಪ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಇದೇ ಆಟೋದಲ್ಲಿದ್ದ ಇತರ ಇಬ್ಬರು ಕಾರ್ಮಿಕರು ಸೇರಿ ಮೂರು ಮಂದಿ ಸಿದ್ದಾಪುರದತ್ತ ಪ್ರಯಾಣಿಸುತ್ತಿದ್ದರು. ಕಾಡಾನೆ ಆಟೋರಿಕ್ಷಾ ಮೇಲೆ ದಾಳಿ ನಡೆಸಿ ಆಟೋಕ್ಕೆ ದಂತದಿAದ ತಿವಿದ ಪರಿಣಾಮ ಚಾಲಕ ಫಿರೋಜ್ ಆಟೋವನ್ನು ವೇಗವಾಗಿ ಚಲಾಯಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಿದರು. ಆದರೂ ಕೂಡ ಒಂಟಿ ಸಲಗ ಕೋಪದಿಂದ ಘೀಳಿಡುತ್ತಾ, ಆಟೋರಿಕ್ಷಾವನ್ನು ಬೆನ್ನಟ್ಟಿದೆ. ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದ ಒಂಟಿ ಸಲಗ ಬಳಿಕ ಸಮೀಪದ ಕಾಫಿ ತೋಟದೊಳಗೆ ತೆರಳಿದೆ.

ಕಾಡಾನೆ ದಾಳಿಗೆ ಸಿಲುಕಿ ಕಾಲಿಗೆ ಗಂಭೀರ ಗಾಯವಾದ ಕಾರ್ಮಿಕ ಪ್ರದೀಪ್‌ಗೆ ಸಿದ್ದಾಪುರದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಯಿತು. ಕಾಡಾನೆ ದಂತದಿAದ ತಿವಿದ ಪರಿಣಾಮ ತೊಡೆಯ ಭಾಗದಲ್ಲಿ ರಂದ್ರವಾಗಿದೆ. ಆಟೋ ಚಾಲಕನ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಿAದ ಚಾಲಕ ಸೇರಿದಂತೆ ನಾಲ್ವರು ಕಾಡಾನೆ ದಾಳಿಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಕೇತ್ ಪೂವಯ್ಯ ಭೇಟಿ

ವಿಚಾರ ತಿಳಿದು ಸಿದ್ದಾಪುರಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಪ್ರದೀಪ್ ಅವರ ಯೋಗಕ್ಷೇಮ ವಿಚಾರಿಸಿದರು. ಗಾಯಾಳುವಿಗೆ ಸ್ಕಾö್ಯನಿಂಗ್ ಮಾಡಲು ಸಿದ್ದಾಪುರದ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದ ಹಿನ್ನೆಲೆ ವೈದ್ಯರ ಬಳಿ ಚರ್ಚಿಸಿ ಗಾಯಾಳು ಪ್ರದೀಪ್‌ನನ್ನು ಅಮ್ಮತ್ತಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಕೇತ್ ಸೂಚಿಸಿದರು. ಅನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ಹಿನ್ನೆಲೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಒಂಟಿ ಸಲಗ ಕಾಡಿಗೆ

ಒಂಟಿ ಸಲಗವನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡಿಗಟ್ಟುವಲ್ಲಿ ಯಶಸ್ವಿಯಾಯಿತು. ಪ್ರದೀಪ್ ಮೇಲೆ ಕಾಡಾನೆ ದಾಳಿ ನಡೆಸಿದ ಹಿನ್ನೆಲೆ ಸಲಗವನ್ನು ಕೂಡಲೇ ಕಾರ್ಯಾಚರಣೆ ನಡೆಸಿ ಕಾಡಿಗಟ್ಟುವಂತೆ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಸೂಚನೆ ನೀಡಿದ ಮೇರೆಗೆ ಪತ್ತೆಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಲಗವನ್ನು ಕಾಡಿಗೆ ಓಡಿಸಿದರು. ಅದು ಮರಳಿ ಬರದಂತೆ ಹಾಗೂ ಅದರ ಚಲನವಲನ ಕಂಡುಹಿಡಿಯಲು ಸಿಬ್ಬಂದಿಗಳನ್ನು ರಾತ್ರಿ ಸಮಯದಲ್ಲಿ ಗಸ್ತು ತಿರುಗುವಂತೆ ಸಂಕೇತ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

೧ ತಿಂಗಳು - ೬ ದಾಳಿ

ಕಳೆದ ಒಂದು ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ಸಿಲುಕಿ ೬ ಮಂದಿ ಕಾರ್ಮಿಕರು ಗಂಭೀರ ಗಾಯಗೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.

ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಾಲ್ಕು ಮಂದಿ ಹಾಗೂ ಮಾಲ್ದಾರೆ ಗ್ರಾಮದಲ್ಲಿ ಒಬ್ಬರು ಹಾಗೂ ಇಂಜಿಲಗೆರೆ ಸಮೀಪ ನಡೆದ ದಾಳಿ ಹಾಗೂ ಶನಿವಾರ ನಡೆದ ಘಟನೆ ಸೇರಿದಂತೆ ೭ ಮಂದಿ ಕಾರ್ಮಿಕರು ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಟೋ ಚಾಲಕರ ಅಸಮಾಧಾನ

ಸಿದ್ದಾಪುರ ವ್ಯಾಪ್ತಿಯಲ್ಲಿ ಮಿತಿಮೀರಿರುವÀ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಕ್ರಮವಹಿಸಬೇಕೆಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.

ಕರ್ನಾಟಕ ಚಾಲಕರ ಒಕ್ಕೂಟದ ಸಂಚಾಲಕ ನೆಲ್ಲಿಕಲ್ ಸುರೇಶ್ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಆರ್. ವಿನೋದ್ ಕುಮಾರ್ ಮಾತನಾಡಿ, ನಿರಂತರವಾಗಿ ಆನೆ-ಮಾನವ ಸಂಘರ್ಷ ನಡೆಯುತ್ತಿದ್ದು, ಆಟೋ ಚಾಲಕರು ಭಯದಿಂದ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಜನಸಾಮಾನ್ಯರಲ್ಲೂ ಭಯಮೂಡಿದೆ. ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳು ಕಾಫಿ ತೋಟಗಳನ್ನು ಬಿಟ್ಟು ತೆರಳುತ್ತಿಲ್ಲ.

ಕಾಡಾನೆಗಳ ಹಾವಳಿಯನ್ನು ತಡೆಗಟ್ಟದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಸ್ಥಳದಲ್ಲಿ ಸಂಕೇತ್ ಪೂವಯ್ಯ ಅಸಮಾಧಾನಗೊಂಡ ಆಟೋ ಚಾಲಕರು ಹಾಗೂ ಗ್ರಾಮಸ್ಥರನ್ನು ಸಂಕೇತ್ ಪೂವಯ್ಯ ಸಮಾಧಾನಪಡಿಸಿ ಕ್ರಮದ ಭರವಸೆ ನೀಡಿದರು.