ಗೋಣಿಕೊಪ್ಪಲು, ಆ. ೯: ಕಾಲ ಬದಲಾದಂತೆ ನಮ್ಮ ಕಣ್ಣಮುಂದೆ ಇರುವ ಅದೆಷ್ಟೊ ವಿಷಯಗಳು ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತವೆ. ಅಂತಹ ಸಾಲಿಗೆ ಇದೀಗ ವೀರಾಜಪೇಟೆ ನಗರದ ಪುರಸಭಾ ವ್ಯಾಪ್ತಿಯಲ್ಲಿರುವ ಟೌನ್ಹಾಲ್ ಎಂದೇ ಪ್ರಖ್ಯಾತಿ ಪಡೆದುಕೊಂಡಿರುವ ನಗರದ ಹೃದಯದ ಭಾಗದಲ್ಲಿರುವ ಟೌನ್ಹಾಲ್ ಕಟ್ಟಡ ಸದ್ಯದಲ್ಲಿಯೇ ಇತಿಹಾಸ ಪುಟ ಸೇರಲಿದೆ.
ಟೌನ್ಹಾಲ್ ಇರುವ ಜಾಗದಲ್ಲಿ ಈ ಹಿಂದೆ ಸಾರ್ವಜನಿಕ ಸಭೆ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಕಟ್ಟಡವಾಗಿತ್ತು.
ಇದೀಗ ಈ ಕಟ್ಟಡವನ್ನು ತೆರವುಗೊಳಿಸುವ ಮೂಲಕ ವೀರಾಜಪೇಟೆ ಪುರಸಭೆಯು ರೂ. ೭.೫೦ ಕೋಟಿ ವೆಚ್ಚದಲ್ಲಿ ನೂತನ ಅತ್ಯಾಧುನಿಕ ಸೌಕರ್ಯವುಳ್ಳ ಕಟ್ಟಡವನ್ನು ನಿರ್ಮಿಸಲಿದೆ.
೧೯೩೨ರಲ್ಲಿ ಕಮಿಷನರ್ ಆಫ್ ಕೂರ್ಗ್ ಆಡಳಿತದಲ್ಲಿಯೇ ಟೌನ್ಹಾಲ್ ಕಟ್ಟಡ ಆರಂಭವಾಗಿತ್ತು. ಅಂದಿನ ಸರ್ಕಾರದ ಮೈಸೂರು ಸಂಸ್ಥಾನದ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಗಳಾಗಿದ್ದ ಸಿ.ಎಂ. ಪೂಣಚ್ಚನವರು ಟೌನ್ಹಾಲನ್ನು ಸಾರ್ವಜನಿಕವಾಗಿ ಲೋಕಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ಕಟ್ಟಡದಲ್ಲಿ ಸಾರ್ವಜನಿಕರ ಹಾಗೂ ಸರ್ಕಾರದ ಕಾರ್ಯಕ್ರಮಗಳು, ಸಭೆಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
೧೯೫೬ರಲ್ಲಿ ಅಂದಿನ ಆಡಳಿತ ಮಂಡಳಿಯ ಡಿ.ಹೆಚ್. ಅಬ್ದುಲ್ ರೆಹಮಾನ್ ಹಾಗೂ ಉಪಾಧ್ಯಕ್ಷರಾಗಿ ಡಾ. ಹಸನ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆಗಿನ ಟೌನ್ ಹಾಲನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸುತ್ತಮುತ್ತಲಿನ ಗ್ರಾಮಗಳಿಗೆ ಇದೊಂದೇ ದೊಡ್ಡದಾದ ಸರ್ಕಾರಿ ಟೌನ್ಹಾಲ್ ಆಗಿತ್ತು. ಇದರಿಂದ ಸಾಕಷ್ಟು ಕಾರ್ಯಕ್ರಮಗಳು ಜರುಗುತ್ತಿದ್ದವು.
ವರ್ಷ ಕಳೆಯುತ್ತಿದ್ದಂತೆ ಕಟ್ಟಡವನ್ನು ಅಭಿವೃದ್ಧಿಪಡಿಸಿದರಾದರೂ ಕಟ್ಟಡವು ಹಂತಹAತವಾಗಿ ಶಿಥಿಲಾವಸ್ಥೆಗೆ ಬಂದು ತಲುಪಿದೆ. ಇದೇ ಕಟ್ಟಡದ ಸ್ಥಳದಲ್ಲಿ ನೂತನವಾದ ಅತ್ಯಾಧುನಿಕ ಮಾದರಿಯ ಸಕಲ ಸೌಕರ್ಯಗಳನ್ನೊಳಗೊಂಡ ಕಟ್ಟಡ ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿದೆ.
ಈಗಾಗಲೇ ನೂತನ ಕಟ್ಟಡಕ್ಕೆ ಬೇಕಾದ ನೀಲನಕ್ಷೆ ತಯಾರಾಗಿದ್ದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣನವರು ನೂತನ ಪುರಸಭಾ ಕಟ್ಟಡಕ್ಕೆ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಈಗಾಗಲೇ ಮಂಜೂರಾದ ಹಣ ಕೊಡಗು ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಆಗಿದೆ. ಸದ್ಯದಲ್ಲಿಯೇ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಪುರಸಭೆಯ ಆಡಳಿತ ಮಂಡಳಿ ವಿನ್ಯಾಸವನ್ನು ರೂಪಿಸಿ ಶಾಸಕರ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು.
ರೂ. ೭.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣ ದಲ್ಲಿ ಪುರಸಭೆ ಕಚೇರಿಯೂ ಸೇರಿದಂತೆ ಪಾರ್ಕಿಂಗ್ ಸೌಕರ್ಯ ಉತ್ತಮ ಸಭಾಂಗಣವೂ ಈ ಕಟ್ಟಡವು ಹೊಂದಿರುತ್ತದೆ. ಇದರಿಂದ ಇತಿಹಾಸ ಹೊಂದಿರುವ ಟೌನ್ಹಾಲ್ ಎಂದೇ ಪ್ರಖ್ಯಾತಿಗಳಿಸಿರುವ ವೀರಾಜಪೇಟೆ ಟೌನ್ಹಾಲ್ ಹಳೆಯ ಕಟ್ಟಡ ಇತಿಹಾಸ ಪುಟವನ್ನು ಸೇರಲಿದ್ದು, ಇದೇ ಜಾಗದಲ್ಲಿ ನೂತನ ಕಟ್ಟಡವು ೧೫೪೨ ಚದರ ಮೀಟರ್ನಲ್ಲಿ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ವಾಗಲಿದೆ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
- ಹೆಚ್.ಕೆ. ಜಗದೀಶ್