ಮಡಿಕೇರಿ, ಆ. ೮: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಹಾಗೂ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರ ಮೇಲೆ ಅಪಪ್ರಚಾರದ ಮೂಲಕ ಭಕ್ತರ ಧಾರ್ಮಿಕ ಭಾವನೆಗಳನ್ನು ಕೆಣಕಲಾಗುತ್ತಿದೆ ಎಂದು ಆಕ್ಷೇಪಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಗಾಂಧಿ ಮೈದಾನದಲ್ಲಿ ಜಮಾವಣೆಗೊಂಡ ನೂರಾರು ಭಕ್ತರು ಪ್ರಸ್ತುತದ ಅಪಪ್ರಚಾರ ಹಾಗೂ ಬೆಳವಣಿಗೆಯ ಕುರಿತಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ವೇದಿಕೆಯ ಸಂಚಾಲಕ ಧನಂಜಯ್ ಅವರು, ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ಮೂಲಕ ರಾಜ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಗಳಾಗಿವೆ. ವಿವಿಧ ಸೇವೆ, ತರಬೇತಿಗಳು, ಸೌಲಭ್ಯ, ನೆರವಿನ ಮೂಲಕ ಕ್ಷೇತ್ರದಿಂದ ಕೊಡಗು ಸೇರಿದಂತೆ ಇಡೀ ರಾಜ್ಯದ ಜನತೆಗೆ ಅನುಕೂಲವಾಗಿದೆ. ಆದರೆ ಇದೀಗ ಕೆಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಈ ಧಾರ್ಮಿಕ ಹಿನ್ನೆಲೆಯ ಕ್ಷೇತ್ರದ ಮೇಲೆ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.

ದೇವರ ಮೇಲಿನ ನಂಬಿಕೆ ಒಂದು ಭಾಗವಾದರೆ ಸಾಮಾಜಿಕ ಚಳುವಳಿಯೂ ಗುರುತಿಸುವಂತದ್ದು, ಅಲ್ಲಿನ ಕೆಲವು ಆರೋಪದ ಕುರಿತು ತನಿಖೆಯಾಗುತ್ತಿದೆ. ತನಿಖೆಯಿಂದ ಸತ್ಯ ತಿಳಿಯಲಿದೆ. ಆದರೆ ವೃಥಾ ಅಪ್ರಪಚಾರ ಸಲ್ಲದು ಎಂದರು.

ಮತ್ತೋರ್ವ ಪ್ರಮುಖರಾದ ಕೆ.ಎಸ್. ದೇವಯ್ಯ ಅವರು ಮಾತನಾಡಿ, ಒಳ್ಳೆಯ ವಿಚಾರಕ್ಕೆ ಜನತೆ ಒಂದಾಗಬೇಕಿದೆ.

(ಮೊದಲ ಪುಟದಿಂದ) ಕೇವಲ ಅಪಪ್ರಚಾರಗಳೇ ಪ್ರಮುಖವಾಗಬಾರದು. ಇಂತಹ ವಿಚಾರಕ್ಕೆ ತಡೆಯೊಡ್ಡಬೇಕೆಂದರು. ದೇವ ನರ್ತಕರ ಸಂಘದ ಪ್ರಮುಖ ರವಿಮೊಗೇರ ಮಾತನಾಡಿ, ದೈವ - ದೇವರ ಮೇಲಿನ ಜನರ ನಂಬಿಕೆಯ ವಿರುದ್ಧವಾಗಿ ಅಪಪ್ರಚಾರದ ಮೂಲಕ ವಿಷಬೀಜ ಬಿತ್ತುವದು ಸರಿಯಲ್ಲ ಎಂದರು.

ಭಕ್ತರ ವೇದಿಕೆಯ ಜಿಲ್ಲಾ ಸಂಚಾಲಕ ಎ.ಟಿ. ರಂಗಸ್ವಾಮಿ ಒಂದು ಸರಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಕ್ಷೇತ್ರ ಮಾಡುತ್ತಿರುವುದನ್ನು ಪರಿಗಣಿಸಬೇಕೆಂದರು. ಬಳಿಕ ಗಾಂಧಿ ಮೈದಾನದಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರಿಗೆ ಮನವಿ ಸಲ್ಲಿಸಲಾಯಿತು. ಪೂರ್ವಜರ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಮಂಜುನಾಥ ಸ್ವಾಮಿ ಹಾಗೂ ಡಾ. ವಿರೇಂದ್ರ ಹೆಗ್ಗಡೆ ಅವರ ಮೇಲಿನ ಅಪಪ್ರಚಾರ, ಸುಳ್ಳು ಸುದ್ದಿ ಹರಿಯಬಿಡುತ್ತಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮಜರುಗಿಸಬೇಕು.

ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾದಳದ ತನಿಖೆ ಸ್ವಾಗತಾರ್ಹ. ಆದರೆ ಅಪಪ್ರಚಾರದ ಬಗ್ಗೆ ಕೂಲಂಕಶ ತನಿಖೆ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭ ಭಕ್ತರ ವೇದಿಕೆಯ ಪರವಾಗಿ ಪ್ರಮುಖರಾದ ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಧೀರ್ಘಕೇಶಿ ಶಿವಣ್ಣ, ಕುಶಾಲನಗರದ ಪುಂಡರೀಕಾಕ್ಷ, ಕೆ.ಕೆ. ಮಹೇಶ್‌ಕುಮಾರ್, ಬೇರೆ ಬೇರೆ ದೇವಸ್ಥಾನಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.