ಮರಗೋಡು, ಆ. ೮ : ಐರಿ ಮಕ್ಕಡ ಕೂಟ ಮತ್ತು ಐಮಂಡ ಕುಟುಂಬದ ಸಹಯೋಗದಲ್ಲಿ ಮರಗೋಡು ಗ್ರಾಮದಲ್ಲಿ ಎರಡನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ತಾ. ೯ರಂದು (ಇಂದು) ಆಯೋಜಿಸಲಾಗಿದೆ. ಐಮಂಡ ರೂಪೇಶ್ ಕುಮಾರ್ ಅವರ ಗದ್ದೆಯಲ್ಲಿ ಈ ಕ್ರೀಡಾಕೂಟ ನಡೆಯಲಿದೆ ಎಂದು ಐರಿ ಮಕ್ಕಡ ಕೂಟದ ಸಂಚಾಲಕ ಐನಂಗಡ ಉದಯ್ ಕುಮಾರ್ ತಿಳಿಸಿದ್ದಾರೆ.
ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟಕ್ಕೆ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಅರಣ್ಯಾಧಿಕಾರಿಗಳಾದ ಎಸಿಎಫ್ ಐರೀರ ಗೋಪಾಲ್, ಮಾಲೆರ ಚರಣ್ ಹಾಗೂ ಐಮಂಡ ಕುಟುಂಬದ ಪಟ್ಟೇದಾರ ಪೊನ್ನಪ್ಪ ಚಾಲನೆ ನೀಡಲಿದ್ದಾರೆ. ಮಹಿಳೆಯರು ಮತ್ತು ಪುರುಷರಿಗೆ ಹ್ಯಾಂಡ್ ಬಾಲ್, ಹಗ್ಗ ಜಗ್ಗಾಟ ಮತ್ತು ವಿವಿಧ ವಯೋಮಾನದವರಿಗೆ ಓಟದ ಸ್ಪರ್ಧೆ ಹಾಗೂ ವಿವಿಧ ಮನರಂಜನಾ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.
ಕೆಸರು ಗದ್ದೆ ಕ್ರೀಡಾಕೂಟದ ಬಳಿಕ ಕಕ್ಕಡ ತಿಂಗಳ ವಿಶೇಷ ತೀನಿ ನಮ್ಮೆ ನಡೆಯಲಿದೆ ಎಂದು ಐಮಂಡ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಸುಧಾ ಪೊನ್ನಪ್ಪ ತಿಳಿಸಿದ್ದಾರೆ. ಏಡಿ, ಕಣಲೆ, ನಾಟಿಕೋಳಿ, ತೆರ್ಮೆಸೊಪ್ಪು, ಕೆಸಸಾರು, ಮದ್ದ್ ತೊಪ್ಪು ಪಾಯಸ ಸೇರಿದಂತೆ ವೈವಿಧ್ಯಮಯ ದೇಸೀ ತಿನಿಸುಗಳನ್ನ ತಯಾರಿಸಿ ಉಣಬಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.