ಸಿದ್ದಾಪುರ, ಆ. ೮: ಆನೆ, ಹುಲಿ ಭಯದ ನೆರಳಿನಲ್ಲಿದ್ದ ಮಾಲ್ದಾರೆ ಸುತ್ತಮುತ್ತ ನಿವಾಸಿಗಳು ಇದೀಗ ಬೀದಿ ನಾಯಿ ಕಾಟಕ್ಕೆ ಒಳಗಾಗಿದ್ದಾರೆ.

ದಿನದಿಂದ ದಿನಕ್ಕೆ ಬೀದಿ ನಾಯಿಗಳ ಸಂಖ್ಯೆಯು ಅಧಿಕವಾಗುತ್ತಿರುವ ಹಿನ್ನೆಲೆ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಆತಂಕದಲ್ಲಿ ಓಡಾಡಬೇಕಾದ ಪರಿಸ್ಥಿತಿ ತಲೆದೋರಿದೆ.

ಇದ್ದಕ್ಕಿದ್ದಂತೆ ೫೦ಕ್ಕೂ ಹೆಚ್ಚು ಬೀದಿ ನಾಯಿಗಳು ದಿಢೀರ್ ಕಾಣಿಸಿಕೊಂಡು ಆಹಾರಕ್ಕಾಗಿ ಮನೆ, ಹೋಟೆಲ್, ಅಂಗಡಿ ಮುಂದೆ ಜಮಾಯಿಸುತ್ತಿವೆ. ಯಾರೋ ಈ ನಾಯಿಗಳನ್ನು ತಂದು ಬಿಟ್ಟು ಹೋಗುತ್ತಿರುವ ಅನುಮಾನವೂ ಮೂಡಿದೆ.

ಬೀದಿನಾಯಿಗಳ ಕಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದು, ವಸ್ತುಗಳ ಖರೀದಿಗೂ ಪಟ್ಟಣಕ್ಕೆ ತೆರಳಲಾಗದ ಸ್ಥಿತಿ ಸೃಷ್ಟಿಯಾಗಿದೆ. ಸಣ್ಣ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳುವ ಕಾರ್ಮಿಕರು ಭಯಪಡುತ್ತಿದ್ದಾರೆ. ಕೂಡಲೇ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.