ನಾಪೋಕ್ಲು, ಜು. ೩೦ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಚೇರಂಬಾಣೆ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟ ಸಹಯೋಗದಲ್ಲಿ ಅರೆ ಭಾಷೆಯಲ್ಲಿ ಕಥೆ ಬರೆಯುವ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಅಕಾಡೆಮಿ ಸದಸ್ಯೆ ಬಡ್ಡಡ್ಕ ಚಂದ್ರಾವತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪುಟಾಣಿ ಕೂಡಕಂಡಿ ಅನ್ವಿತ ಸುದೀಪ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಒಂದು ಅಪರೂಪದ ಸುವರ್ಣ ಅವಕಾಶ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ನುಡಿದರು.

ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಚೇರಂಬಾಣೆ ಗೌಡ ಸಮಾಜ ಕೇವಲ ಮದುವೆ ಸಮಾರಂಭಗಳಿಗೆ ಸೀಮಿತವಾಗದೆ ಕಲೆ ಕ್ರೀಡೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೂ ನೆರಳಾಗಬೇಕು ಎಂಬ ಉದ್ದೇಶದಿಂದ ಮಹಿಳಾ ಒಕ್ಕೂಟವನ್ನು ರಚಿಸಲಾಗಿದೆ. ಯುವ ಪೀಳಿಗೆ ಹಾಗೂ ಮಹಿಳೆಯರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಸದಸ್ಯ ಚಂದ್ರಾವತಿ ಬಡ್ಡಡ್ಕ ಮಾತನಾಡಿ, ಮಕ್ಕಳನ್ನು ಭವಿಷ್ಯದ ಸಾಂಸ್ಕೃತಿಕ ರಾಯಭಾರಿಗಳನ್ನಾಗಿ ಮಾಡಬೇಕು. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಿದರೆ ಅವರು ಮುಂದಿನ ತಲೆಮಾರಿಗೆ ಆಸ್ತಿಯಾಗುತ್ತಾರೆ. ಮಕ್ಕಳು ಮತ್ತು ಯುವ ಜನತೆಯಲ್ಲಿ ಅರೆಭಾಷೆೆ ಮತ್ತು ಸಂಸ್ಕೃತಿಯ ಒಲವು ಮೂಡಿಸಿ ಅದರಲ್ಲಿ ತೊಡಗಿ ಕೊಳ್ಳುವಂತೆ ಮಾಡಿದಾಗ ಅವರಿಂದ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಅವರು ಮಕ್ಕಳ ಸ್ವರಚಿತ ಕತೆಗಳನ್ನು ಅಕಾಡೆಮಿಯು ಪ್ರಕಟಿಸುವ ತ್ರೈಮಾಸಿಕ ‘ಹಿಂಗಾರ’ದಲ್ಲಿ ಪ್ರಕಟಿಸುವುದಾಗಿ ನುಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಅವರು ವಿದ್ಯಾರ್ಥಿಗಳು ಸಾಹಿತ್ಯ ಚಪ್ಪರದ ಕಂಬಗಳಿದ್ದAತೆ. ಅವರಲ್ಲಿ ಸಾಹಿತ್ಯದ ಗಂಧ ತೀಡಿದ್ದಲ್ಲಿ ಮುಂದೆ ಅವರು ಪ್ರತಿಭಾವಂತರಾಗುವಲ್ಲಿ ಸಂಶಯವಿಲ್ಲ ಎಂದರು. ಡಾ. ಪುನೀತ್ ರಾಘವೇಂದ್ರ ಕುಂಟುಕಾಡು ಅವರು ವಿದ್ಯಾರ್ಥಿ ಗಳಿಗೆ ಉಚ್ಚಾರಣೆಯಲ್ಲಿ ಸ್ಪಷ್ಪತೆ ಕಥೆಯ ಸ್ವರೂಪ ಶೀರ್ಷಿಕೆ ಕಥಾವಸ್ತುಗಳ ಆಯ್ಕೆ ಕುರಿತು ಮನಮುಟ್ಟುವಂತೆ ತಿಳಿಸಿಕೊಟ್ಟರು.

ಈ ಸಂದರ್ಭ ಗೌಡ ಸಮಾಜದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿ, ಕೊಡಪಾಲು ತೀರ್ಥ ಗಣಪತಿ ಸ್ವಾಗತಿಸಿ, ಕೇಕಡ ಪೂಜಾ ನಾಗೇಂದ್ರ, ವಂದಿಸಿದರು.

- ದುಗ್ಗಳ