ಕಣಿವೆ, ಜು. ೩೦: ಲಾರಿ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲಿ ದುರ್ಮರಣಕ್ಕೀಡಾದ ಘಟನೆ ಶಿರಂಗಾಲದಲ್ಲಿ ನಡೆದಿದೆ.
ಕೊಡಗಿನ ಗಡಿಭಾಗ ಪಿರಿಯಾ ಪಟ್ಟಣ ತಾಲೂಕಿನ ಚಾಮರಾಯನ ಕೋಟೆ ನಿವಾಸಿ, ಕೂಲಿ ಕಾರ್ಮಿಕ ಅಶೋಕ್ (೩೬) ಮೃತ ದುರ್ದೈವಿ.
ಅಶೋಕ್ ಎಂದಿನAತೆ ಬುಧವಾರ ಬೆಳಿಗ್ಗೆ ತಮ್ಮ ನಿವಾಸದಿಂದ ಕೃಷಿ ಕೆಲಸಕ್ಕೆಂದು ಡಿಯೋ ಸ್ಕೂಟರ್‌ನಲ್ಲಿ (ಕೆ.ಎ.-೨೧-ಇಎ-೬೩೧೪) ಶಿರಂಗಾಲದ ಮೂಲಕ ಕಡುವಿನಹೊಸಳ್ಳಿಯತ್ತ ತೆರಳುತ್ತಿದ್ದ ವೇಳೆ ಅರಕಲಗೂಡಿನಿಂದ ಕುಶಾಲನಗರದತ್ತ ಬರುತ್ತಿದ್ದ ಲಾರಿ (ಕೆ.ಎ.-೦೫-ಎ.ಸಿ.-೬೯೯೪) ನಡುವೆ ಶಿರಂಗಾಲ ಗ್ರಾಮದ ಮಂಟಿಗಮ್ಮನ ದೇವಾಲಯ ಸ್ವಾಗತ ಕಮಾನು ಬಳಿ ಹೆದ್ದಾರಿಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರ ಅಶೋಕ್ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತವಾದ ತಕ್ಷಣ ಲಾರಿ ಚಾಲಕ ಅರಕಲಗೂಡಿನ ಕುಮಾರ್ ಪೊಲೀಸ್ ಠಾಣೆಗೆ ಓಡಿ ಶರಣಾಗಿದ್ದಾನೆ. ಸ್ಥಳೀಯರು ೧೧೨ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ ಹಿನ್ನೆಲೆ ಸ್ಥಳಕ್ಕೆ ಕುಶಾಲನಗರ ಡಿ.ವೈ.ಎಸಿ.್ಪ ಚಂದ್ರಶೇಖರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತೆರಳಿ ಪರಿಶೀಲನೆ ಮಾಡಿ ಮಹಜರು ಕೈಗೊಂಡು ಮೃತದೇಹವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.
ಘಟನಾ ಸ್ಥಳದಲ್ಲಿ ಮೃತ ಅಶೋಕ್ ಪತ್ನಿ ರಂಜಿತಾ ಅವರು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಮೃತ ಅಶೋಕ್‌ಗೆ ಏಳನೇ ತರಗತಿಯಲ್ಲಿರುವ ಪುತ್ರ ಸಮರ್ಥ್, ಮೂರನೇ ತರಗತಿಯಲ್ಲಿರುವ ಪುತ್ರಿ ಸಾನ್ವಿ ಇದ್ದಾರೆ. ಪುತ್ರ ಸಮರ್ಥ್ ಹೃದಯ ಸಂಬAಧಿ ಕಾಯಿಲೆಯಿಂದ ಬಳಲುತ್ತಿದ್ದು, ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಬೇಕಿದ್ದ ಅಶೋಕ್ ದುರ್ಮರಣ ಬಡ ಕುಟುಂಬಕ್ಕೆ ಆಘಾತ ನೀಡಿದೆ. ಆರೋಪಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿರುವ ಕುಶಾನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.