ಕಣಿವೆ, ಜು. ೨೩: ಮಾಧ್ಯಮ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾಧ್ಯಮಗಳು ರಾಜಕಾರಣಿಗಳನ್ನು ಟೀಕಿಸಿದಷ್ಟು ಎಚ್ಚೆತ್ತುಕೊಳ್ಳಲು ಅನುಕೂಲವಾಗುತ್ತದೆ, ಸಾಮಾಜಿಕ ಜಾಲತಾಣಗಳಿಂದ ಮುದ್ರಣ ಮಾಧ್ಯಮ ಕಳೆಗುಂದಬಾರದು. ವ್ಯವಸ್ಥೆಯ ಮೇಲಿನ ಕೆಲವು ಏರುಪೇರುಗಳಿಗೆ ಆರೋಗ್ಯಕಾರಿ ಟೀಕೆ - ಟಿಪ್ಪಣಿಗಳು ಮಾಧ್ಯಮದಲ್ಲಿರಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅಭಿಪ್ರಾಯಪಟ್ಟರು.
ಕೊಡಗು ವಿಶ್ವವಿದ್ಯಾಲಯ ಹಾಗೂ ಕೊಡಗು ವಿವಿ ಹಿತರಕ್ಷಣಾ ಸಮಿತಿ ವತಿಯಿಂದ ವಿವಿಯ ಹಾರಂಗಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳು ಮುಕ್ತವಾಗಿ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಮಾಧ್ಯಮ ವೇದಿಕೆಯಾಗಬೇಕಿದೆ. ಹಾಗೆಯೇ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕೊಡಗು ವಿವಿ ಉಳಿಸುವ ಹೋರಾಟದಲ್ಲಿ ಪತ್ರಕರ್ತರ ಕಾರ್ಯವನ್ನು ಇದೇ ಸಂದರ್ಭ ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅವರು, ಪತ್ರಕರ್ತರು ಸಮಾಜದ ಆಗುಹೋಗುಗಳ ಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕ ಸಮಾಜದ ಕಣ್ಗಾವಲಾಗಿ ಕಾರ್ಯನಿರ್ವಹಿಸಬೇಕೆಂದು ಕರೆಕೊಟ್ಟರು.
ಕೊಡಗು ವಿವಿ ಉಳಿವಿನ ಬಗ್ಗೆ ಸರ್ಕಾರ ಇದುವರೆಗೂ ತನ್ನ ನಿಲುವು ಪ್ರಕಟಪಡಿಸದ ಹಿನ್ನೆಲೆಯಲ್ಲಿ ಶಾಸಕರು ಈ ಬಗ್ಗೆ ಸರ್ಕಾರದೊಂದಿಗೆ ವ್ಯವಹರಿಸಿ ಸರಕಾರ ಕೊಡಗು ವಿವಿಯನ್ನು ಮುಚ್ಚುವುದಿಲ್ಲ ಎಂಬ ಬಗ್ಗೆ ಸ್ಪಷ್ಟ ಹೇಳಿಕೆ ನೀಡಲು ಶ್ರಮಿಸಬೇಕು ಎಂದರು. ಈ ಬಗ್ಗೆ ವಿವಿಯೊಂದಿಗೆ ಗಟ್ಟಿಯಾಗಿ ನಿಲ್ಲುವ ಮೂಲಕ ಖಾಸಗಿ ಸಂಸ್ಥೆಗಳು ನೀಡಬಹುದಾದ ಸಿಎಸ್‌ಆರ್ ಅನುದಾನಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳು ಯಾವುದೇ ವ್ಯಕ್ತಿಯನ್ನು ಕಠಿಣ ಶಬ್ಧಗಳಿಂದ ವೈಯಕ್ತಿಕ ತೇಜೋವಧೆ ಮಾಡುವ ಮೂಲಕ ಸಾಮಾಜಿಕ ಸ್ವಾಸ್ಥö್ಯ ಕದಡುವ ಕೆಲಸ ಆಗಬಾರದು ಎಂದು ಆಶಿಸಿದ ಚಿದ್ವಿಲಾಸ್, ಮಾಧ್ಯಮಗಳಿಂದಾಗಿ ಹೊಸ ಪ್ರತಿಭೆಗಳು, ಹೊಸ ಚಿಂತನೆಗಳ ಉಗಮವಾಗುತ್ತಿದೆ ಎಂದೂ ಶ್ಲಾಘಿಸಿದರು.
ಇಂದು ಸಮಾಜ ಅನೈತಿಕ ಚಟುವಟಿಕೆಗಳು ಹಾಗೂ ಕ್ರೌರ್ಯದತ್ತ ಮುಖ ಮಾಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಚಿದ್ವಿಲಾಸ್, ಮೊಬೈಲ್‌ಗಳ ಬಳಕೆ ಎಲ್ಲರಿಗೂ ಜೀವನದ ಅವಿಭಾಜ್ಯವಾಗಿರುವ ಈ ಹೊತ್ತಿನಲ್ಲಿ ಪೂರ್ವಜರು ಯಾವುದೇ ದುರಾಸೆಗಳಿಗೂ ಒಳಗಾಗದೇ ಸಂತೃಪ್ತ ಬದುಕನ್ನು ಕಟ್ಟಿದ್ದನ್ನು ನಾವು ಅವಲೋಕಿಸಬೇಕಿದೆ ಎಂದು ವಿಶ್ಲೇಷಿಸಿದರು.
ಇಂದು ವಿದ್ಯಾರ್ಥಿಗಳು ಹಾಗೂ ಯುವಜನಾಂಗ ಐಟಿ ಕಂಪೆನಿಗಳಿಗೆ ಹೋಗುವ ಆಲೋಚನೆ ಬಿಟ್ಟು ಕೃಷಿ, ಕೋಳಿ ಸಾಕಣೆ, ಹೈನುಗಾರಿಕೆ, ಅಣಬೆ ಬೇಸಾಯ, ವ್ಯಾಪಾರ ಹಾಗೂ ಬೇರೆ ಬೇರೆ ಕಾರ್ಯಕ್ಷೇತ್ರಗಳತ್ತ ತೊಡಗಿಸಿಕೊಂಡು ಸ್ವಯಂ ಉದ್ಯೋಗ ಕಂಡುಕೊಳ್ಳಲು ಕಿವಿಮಾತು ಹೇಳಿದರು.
ಸಾಮಾಜಿಕ ಜಾಲತಾಣ ಆರಂಭಕ್ಕೂ ಮುನ್ನ ಜನ ತಮ್ಮ ಕುಟುಂಬ, ಸ್ನೇಹಿತರು, ನೆರೆಯವರು ಹೀಗೆ ವಿವಿಧ ರೀತಿಯಲ್ಲಿ ಬೆರೆಯುತ್ತಿದ್ದು, ಇಂದು ಶೇ. ೫೭ರಷ್ಟು ಮಂದಿ ಅದನ್ನೆಲ್ಲಾ ಬಿಟ್ಟು ಆನ್‌ಲೈನ್‌ನಲ್ಲಿ ಸಮಯ ಕಳೆಯುತ್ತಿರುವ ಬಗ್ಗೆ ಅಮೇರಿಕಾ ಸಂಶೋಧನೆ ನಡೆಸಿರುವುದನ್ನು ಅವರು ಉಲ್ಲೇಖಿಸಿ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೊಡಗು ವಿವಿ ಹೋರಾಟದ ವಿಚಾರದಲ್ಲಿ ಕೊಡಗಿನ ಮಾಧ್ಯಮಗಳ ರಚನಾತ್ಮಕವಾದ ಹಾಗೂ ಸಾಮಾಜಿಕ ಜವಾಬ್ದಾರಿ ಅವಿಸ್ಮರಣೀಯ, ಮಾಧ್ಯಮರಂಗ ಇಂದು ಪ್ರಾಮಾಣಿಕವಾಗಿ ತನ್ನ ಕೆಲಸ ಮಾಡಿದರೆ ಸಮಾಜದ ಬದಲಾವಣೆ ಸಾಧ್ಯವಿದೆ.
ಶಾಸಕಾಂಗ, ಕಾರ್ಯಾಂಗ ಒಂದಷ್ಟು ಏರುಪೇರುಗಳಿಂದ ಕೂಡಿದ್ದು, ಮಾಧ್ಯಮ ರಂಗ ಆಶಾಕಿರಣವಾಗಿ ಉಳಿದಿದೆ. ರಾಜಕಾರಣಿ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಹೊಣೆಗಾರಿಕೆಯ ಪ್ರಾಮುಖ್ಯತೆ ಪತ್ರಿಕೆಗಳದ್ದಾಗಿದೆ ಎಂದರು. ಜನಾಭಿಪ್ರಾಯ ಮೂಡಿಸುವಷ್ಟರಮಟ್ಟಿಗೆ ಮುದ್ರಣ ಮಾಧ್ಯಮ ಅಂತಃಪ್ರಜ್ಞೆ ಹಾಗೂ ಆತ್ಮಸಾಕ್ಷಿಗೆ ಬದ್ಧವಾಗಿದ್ದು, ದೃಶ್ಯ ಮಾಧ್ಯಮಗಳು ಮಾಲೀಕನ ಅಣತಿಯಂತೆ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಕಾರ್ಯ ನಿರ್ವಹಿಸುತ್ತಿವೆ ಎಂದು ಶಶಿಧರ್ ವಿಷಾದಿಸಿದರು.
ಸಾಮಾಜಿಕ ಸನ್ನಿಯಂತಾಗಿರುವ ಇಂದಿನ ದಿನಗಳಲ್ಲಿ ಸಮಾಜವನ್ನು ಆರೋಗ್ಯಕಾರಿಯಾಗಿ ನಿರ್ಮಾಣ ಮಾಡಬೇಕಿರುವುದು ಅತ್ಯಗತ್ಯವಿದೆ. ಸಿದ್ಧಾಂತ, ಆತ್ಮಸಾಕ್ಷಿಗೆ ಬದ್ಧರಾಗುವ ಮಾಧ್ಯಮ ಇಂದು ಬೇಕಿದೇ ಹೊರತು ಭೂಗತ ಪಾತಕಿಗಳನ್ನು ವೈಭವೀಕರಿಸುವ ದೃಶ್ಯ ಮಾಧ್ಯಮಗಳದ್ದಲ್ಲ ಎಂದರು. ಕೊಡಗು ವಿಶ್ವವಿದ್ಯಾಲಯಕ್ಕೆ ಶಾಸಕರ ವಿವೇಚನಾ ನಿಧಿಯಿಂದ ಪೂರಕವಾದ ೧೨.೫ ಕೋಟಿ ರೂ. ಅನುದಾನವನ್ನು ಕೊಡಬೇಕು ಎಂದು ಇದೇ ಸಂದರ್ಭ ಮನವಿ ಮಾಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು. ಮಾಧ್ಯಮ ಕ್ಷೇತ್ರ ಹಿಂದಿನಷ್ಟು ಸ್ವತಂತ್ರö್ಯವಾಗಿಲ್ಲ, ಪತ್ರಿಕಾಗೋಷ್ಠಿಗಳ ಸುದ್ದಿಗಳನ್ನು ಪ್ರಕಟಿಸಿದರೂ, ಭಿತ್ತರಿಸಿದರೂ, ಮೊಕದ್ದಮೆಗಳನ್ನು ಎದುರಿಸಬೇಕಾದ ಸ್ಥಿತಿ ಈ ಕ್ಷೇತ್ರದ್ದು ಎಂದು ನೋವಿನ ನುಡಿಯಾಡಿದ ಇವರು, ಆದರೂ ಮಾಧ್ಯಮಗಳು ಸಮಾಜದ ಸ್ವಾಸ್ಥö್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಆಧಾರಸ್ಥಂಬಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಇವುಗಳ ಜೊತೆ ಪತ್ರಿಕಾಂಗ ಕೂಡ ಪ್ರಮುಖವಾಗಿದ್ದು, ಆ ಮೂರು ಅಂಗಗಳ ಚಟುವಟಿಕೆಗಳನ್ನು ಸೂಕ್ಷö್ಮವಾಗಿ ಗಮನಿಸುವ, ವ್ಯವಸ್ಥೆಗಳನ್ನು ಅಧ್ಯಯನ ಮಾಡುವ, ತಪ್ಪನ್ನು ವೈಜ್ಞಾನಿಕವಾಗಿ ಹಾಗೂ ವೈಚಾರಿಕವಾಗಿ ಬಹಿರಂಗಪಡಿಸುವ ಜವಾಬ್ದಾರಿ ಪತ್ರಿಕಾಂಗದ್ದು ಎಂದು ಹೇಳಿದರಲ್ಲದೆ, ಮೌಲ್ಯಾಧಾರಿತ ರಾಜಕೀಯ ಹಾಗೂ ಶಿಕ್ಷಣಗಳು ಹೇಗೆ ಮುಖ್ಯವೋ ಪತ್ರಿಕಾಂಗ ಕೂಡ ಮೌಲ್ಯಾಧಾರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಆಶಿಸಿದರು.
ಕೊಡಗು ವಿವಿ ಕುಲಸಚಿವ ಎಂ. ಸುರೇಶ್, ಕೊಡಗು ವಿವಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡಗು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಎ. ಮುರಳೀಧರ್ ಇದ್ದರು. ಉಪನ್ಯಾಸಕ ಡಾ. ಜಮೀರ್ ಅಹಮದ್ ನಿರೂಪಿಸಿ, ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಸ್ವಾಗತಿಸಿದರು, ಕೆ.ಎಸ್. ಮೂರ್ತಿ ವಂದಿಸಿದರು.
ಇದೇ ಸಂದರ್ಭ ಕೊಡಗು ವಿವಿ ಉಳಿಸಿ ಹೋರಾಟಕ್ಕೆ ಬೆಂಬಲ ನೀಡಿದ ಹಲವು ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.