ಸೋಮವಾರಪೇಟೆ, ಜು.೧೯ : ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ವೊಂದು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಗುದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ ಘಟನೆ ಇಂದು ಮುಂಜಾನೆ ಸಮೀಪದ ಕೂಗೇಕೋಡಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನಿAದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಇಂದು ಮುಂಜಾನೆ ೪ ಗಂಟೆಗೆ ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಪಂಚಾಯಿತಿ ವ್ಯಾಪ್ತಿಯ ಕೂಗೇಕೋಡಿಯ ಅಂಬೇಡ್ಕರ್ ಭವನ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ೩ ವಿದ್ಯುತ್ ಕಂಬಗಳಿಗೆ ಗುದ್ದಿದೆ. ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಸ್‌ಗೆ ಒರಗಿ ನಿಂತಿದ್ದು, ಅದೃಷ್ಟವಶಾತ್ ಕಂಬಗಳು ತುಂಡಾಗಿ ವಿದ್ಯುತ್ ತಂತಿಗಳು ಬಸ್ ಮೇಲೆ ಬಿದ್ದಿಲ್ಲ. ಬಸ್‌ನಲ್ಲಿ ೨೦ ಪ್ರಯಾಣಿಕರಿದ್ದು, ಒಂದು ವೇಳೆ ತಂತಿಗಳು ತುಂಡಾಗಿ ಬಸ್‌ನ್ನು ಸ್ಪರ್ಶಿಸಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.