ಸಿದ್ದಾಪುರ, ಜು. ೧೯: ಕಾಡಾನೆಗಳು ರಾತ್ರಿ ವೇಳೆ ಮನೆ ಮೇಲೆ ಧಾಳಿ ನಡೆಸಿ ಹಾನಿಗೊಳಿಸಿರುವ ಘಟನೆ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಧನುಗಾಲ ಗ್ರಾಮದಲ್ಲಿ ನಡೆದಿದ್ದು ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಧನುಗಾಲ ಗ್ರಾಮದ ನಿವಾಸಿ ಚೊಂದಮ್ಮ ಎಂಬವರ ಮನೆಯ ಮೇಲೆ ರಾತ್ರಿ ೧೦ ಗಂಟೆಗೆ ಕಾಡಾನೆಗಳು ದಾಳಿ ನಡೆಸಿ ಮನೆಯ ಒಂದು ಭಾಗಕ್ಕೆ ಹಾನಿ ಮಾಡಿ ಮನೆಯ ಮೇಲ್ಛಾವಣಿಯ ಶೀಟುಗಳನ್ನು ಎಳೆದು ಹಾಕಿ ನಾಶಪಡಿಸಿದೆ. ಇದರಿಂದ ಆತಂಕಗೊAಡು ಮನೆಮಂದಿ ಪ್ರಾಣಭಯದಿಂದಲೇ ಬೆಳಗಿನವರೆಗೆ ನಿದ್ರೆ ಕೆಟ್ಟಿದ್ದಾರೆ. ಚೊಂದಮ್ಮ ಅವರಿಗೆ ಅಪಾರ ನಷ್ಟ ಉಂಟಾಗಿದ್ದು, ತಿತಿಮತಿ ವಲಯ ಅರಣ್ಯ ಅಧಿಕಾರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡುವುದಾಗಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ.