ಸೋಮವಾರಪೇಟೆ, ಜು.೧೯ : ಪ್ರಜಾಪ್ರಭುತ್ವದ ಯಶಸ್ವಿಗೆ ಪತ್ರಕರ್ತರ ಸೇವೆ ಅಮೂಲ್ಯವಾದುದು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಸಂಘದ ವತಿಯಿಂದ ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಮುಖಿಯಾಗಿ ಕೆಲಸ ಮಾಡುವ ಪತ್ರಕರ್ತರು ಸೈನಿಕರಿಗೆ ಸಮ. ಇವತ್ತಿಗೂ ಪತ್ರಕರ್ತರು ಸಮಾಜದ ಉಳಿತಿಗಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ವಿದ್ಯೆ ಅಪೂರ್ವವಾದ ಸಂಪತ್ತು. ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡಲು ವಿದ್ಯೆಯೇ ದಾರಿದೀಪ ಎಂದು ಅಭಿಪ್ರಾಯಿಸಿದರು.

ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಾಮಾನ್ಯ ಜ್ಞಾನದ ಅಗತ್ಯತೆ ಹೆಚ್ಚಿದೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ವಿಜೇತರಾದ ಹಿರಿಕರ ರವಿ, ದಿನೇಶ್ ಮಾಲಂಬಿ ಹಾಗು ಅಬ್ಬೂರುಕಟ್ಟೆಯ ಪತ್ರಿಕಾ ವಿತರಕ ಲೋಕೇಶ್ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪ್ರಜಾಪ್ರುಭುತ್ವದಲ್ಲಿ ಪತ್ರಿಕೆಗಳ ಪಾತ್ರ’ ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಿರೀಕ್ಷಾ, ದ್ವಿತೀಯ ಸ್ಥಾನ ಪಡೆದ ಅಶ್ವಿನಿ, ತೃತೀಯ ಸ್ಥಾನ ಪಡೆದ ರಂಜಿತಾ ಅವರಿಗೆ ಬಹುಮಾನ ವಿತರಿಸಲಾಯಿತು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ್ ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ, ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ್ ಇದ್ದರು. ಶಿಕ್ಷಕರಾದ ತೇಜಾಕ್ಷಿ, ರತ್ನ ಕುಮಾರ್, ಪತ್ರಕರ್ತ ಬಿ.ಎ.ಭಾಸ್ಕರ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.